ದೇಶದ ಐಟಿ ಕಂಪನಿಗಳು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿವೆ. ಹಾಗೆಂದ ಮಾತ್ರಕ್ಕೆ ಈ ಕಂಪನಿಗಳಿಗೆ ಆರ್ಥಿಕ ಮುಗ್ಗಟ್ಟು ಅಥವಾ ಇನ್ನಾವುದೋ ಸಮಸ್ಯೆ ಕಾಡುತ್ತಿಲ್ಲ. ಬದಲಿಗೆ ತಮ್ಮ ಸಿಬ್ಬಂದಿಯನ್ನು ಕಚೇರಿಗೆ ಬಂದು ಕೆಲಸ ಮಾಡಿ ಎಂದು ಗೋಗರೆದರೂ ಬಹುತೇಕ ಮಂದಿ ಬರಲು ಹಿಂದೇಟು ಹಾಕುತ್ತಿರುವುದೇ ಸಂಕಷ್ಟವಾಗಿದೆ.
ಕೋವಿಡ್-19 ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಟೆಕ್ಕಿಗಳು ಮನೆಯ ವಾತಾವರಣಕ್ಕೆ ಹೊಂದಿಕೊಂಡಿರುವಂತೆ ಕಾಣುತ್ತಿದೆ. ಈ ಕಾರಣದಿಂದಲೇ ಅವರು ಕಚೇರಿಗೆ ಹೋಗಿ ಕೆಲಸ ಮಾಡಲು ಒಪ್ಪುತ್ತಿಲ್ಲವಂತೆ.
ನಾಸ್ಕಾಂ-ಬಿಸಿಜಿ ನಡೆಸಿದ ಸಮೀಕ್ಷೆ ವರದಿ ಪ್ರಕಾರ ಶೇ.5 ರಷ್ಟು ಮಂದಿ ಮಾತ್ರ ಕಚೇರಿಗೆ ಬಂದು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ.
ಶೇ.70 ರಷ್ಟು ಮಂದಿ ಸಿಬ್ಬಂದಿ ಹೈಬ್ರೀಡ್ ಕಾರ್ಯ ನಿರ್ವಹಣೆಯ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದರೆ, ಶೇ.25 ರಷ್ಟು ಮಂದಿ ರಿಮೋಟ್ ವರ್ಕಿಂಗ್ ಮಾದರಿಯಲ್ಲಿ ಕೆಲಸ ಮಾಡಲು ಬಯಸಿದ್ದಾರೆ.
ಚೆನ್ನೈನಲ್ಲಿ ನಡೆದ ಭವಿಷ್ಯದ ಕರ್ತವ್ಯ 2022 ಶೃಂಗಸಭೆಯಲ್ಲಿ ನಾಸ್ಕಾಂ ಈ ವರದಿಯನ್ನು ಬಿಡುಗಡೆ ಮಾಡಿದೆ. ಒಟ್ಟು ಸಿಬ್ಬಂದಿ ಪೈಕಿ ಕೇವಲ ಶೇ.5 ರಷ್ಟು ಮಾತ್ರ ಕಚೇರಿಗೆ ಬಂದು ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
2021 ರ ಜುಲೈ-ಸೆಪ್ಟಂಬರ್ ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ವಿಶ್ವದಾದ್ಯಂತದ ಸುಮಾರು 2 ಲಕ್ಷ ಮಂದಿ ಟೆಕ್ಕಿಗಳು ಪಾಲ್ಗೊಂಡಿದ್ದರು. ಈ ಪೈಕಿ 500 ಮಂದಿ ಭಾರತೀಯರಾಗಿದ್ದರು.