ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ಗಣನೀಯವಾಗಿ ಬೆಳೆದಿದೆ. ಇದು ಭಾರತೀಯ ಗ್ರಾಹಕರಲ್ಲಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫೇಮ್-2 ಮತ್ತು ಸಬ್ಸಿಡಿಗಳಿಂದ ಜನರು ಇದರತ್ತ ಆಕರ್ಷಿತರಾಗಿರಬಹುದು.
ಆದರೂ ಕೂಡ ದೇಶದಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಪಾಲು ಇನ್ನೂ ಚಿಕ್ಕದಾಗಿದೆ ಹಾಗೂ ಇದು ವೇಗವಾಗಿ ಬದಲಾಗುವುದಿಲ್ಲ ಎಂದು ಹೇಳಲಾಗಿದೆ. ಹವಾಮಾನ ಬದಲಾವಣೆ, ಹೆಚ್ಚಿನ ಇಂಧನ ವೆಚ್ಚಗಳು, ಉತ್ತಮ ಚಾಲನಾ ಅನುಭವದಿಂದಾಗಿ ಭಾರತೀಯ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚಾಗಿ ಆಕರ್ಷಿತರಾಗಿದ್ದಾರೆ. ಇಷ್ಟಾದ್ರೂ ಬ್ಯಾಟರಿ ಎಲೆಕ್ಟ್ರಿಕ್ ಕಾರು ಅಥವಾ ದ್ವಿಚಕ್ರ ವಾಹನವನ್ನು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರ ಸಂಖ್ಯೆ ಕೇವಲ ಶೇ. ಐದರಷ್ಟು ಮಾತ್ರ ಇದೆ.
ಜಿಎಸಿಎಸ್ 2022 ರ ಪ್ರಕಾರ, ಶೇಕಡಾ 57ರಷ್ಟು ಗ್ರಾಹಕರು ಪೆಟ್ರೋಲ್ ಅಥವಾ ಡೀಸೆಲ್-ಚಾಲಿತ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ, ಶೇಕಡಾ 21 ಮತ್ತು 10ರಷ್ಟು ಗ್ರಾಹಕರು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಮತ್ತು ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಚಾರ್ಜಿಂಗ್ ಮೂಲಸೌಕರ್ಯ, ಬ್ಯಾಟರಿ ಸುರಕ್ಷತೆ, ಇವಿಗಳ ವೆಚ್ಚ, ಚಾರ್ಜಿಂಗ್ ಸಮಯ ಮತ್ತು ಡ್ರೈವಿಂಗ್ ಶ್ರೇಣಿಯಂತಹ ಅಂಶಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜಿಸುವಾಗ ಗ್ರಾಹಕರು ಎದುರಿಸುವ ಪ್ರಮುಖ ಅಡಚಣೆಗಳಾಗಿವೆ ಎಂದು ಅಧ್ಯಯನವು ಉಲ್ಲೇಖಿಸಿದೆ. ಅಂದಹಾಗೆ, ಮುಂದಿನ ಮೂರು ವರ್ಷಗಳಲ್ಲಿ ಸುಮಾರು ಶೇ.37 ರಷ್ಟು ಭಾರತೀಯ ಗ್ರಾಹಕರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಆಸಕ್ತಿ ಹೊಂದಿರುವುದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಯಲ್ಲಿ ವೇಗವಾಗಿ ಬೆಳೆಯಲಿದೆ ಎಂದು ಡೆಲಾಯ್ಟ್ ಅಧ್ಯಯನವು ಉಲ್ಲೇಖಿಸಿದೆ.