ಇತ್ತೀಚೆಗಷ್ಟೆ ಕಚೇರಿಗಳಲ್ಲಿ ಕೆಲಸದ ಸಮಯದ ಕುರಿತಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ 8-9 ತಾಸು ಕೆಲಸದ ಅವಧಿಯಿದೆ. ವಾರಾಂತ್ಯದಲ್ಲಿ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕೆಂಬುದು ನಿಯಮ.
ಕೆಲವು ಖಾಸಗಿ ಕಂಪನಿಗಳಲ್ಲಿ ವಾರದಲ್ಲಿ ಎರಡು ದಿನ ರಜೆಯಿರುತ್ತದೆ. ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಕೆಲಸದ ಸಂಸ್ಕೃತಿ ಮತ್ತು ಕೆಲಸದ ಸಮಯ ವಿಭಿನ್ನವಾಗಿರುತ್ತದೆ. ಕೆಲವೆಡೆ ಜನರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಇನ್ನೊಂದಷ್ಟು ಕಡೆಗಳಲ್ಲಿ ದಿನಕ್ಕೆ ಕೇವಲ 3 ತಾಸು ಕೆಲಸ.
ಇಂಟರ್ ನ್ಯಾಶನಲ್ ಲೇಬರ್ ಆರ್ಗನೈಸೇಶನ್ ಪ್ರಪಂಚದ ಅನೇಕ ದೇಶಗಳಲ್ಲಿನ ಕಚೇರಿ ಕೆಲಸದ ಅವಧಿಗೆ ಸಂಬಂಧಿಸಿದ ಪಟ್ಟಿಯನ್ನು ದಿನಕ್ಕೆ ಮೂರ್ನಾಲ್ಕು ಗಂಟೆ ಮಾತ್ರ ಕೆಲಸ ಮಾಡಿ ಉಳಿದ ಸಮಯವನ್ನು ಮೋಜು-ಮಸ್ತಿಯಲ್ಲಿ ಕಳೆಯುವ ಅನೇಕ ದೇಶಗಳ ಹೆಸರುಗಳು ಈ ಪಟ್ಟಿಯಲ್ಲಿವೆ.
ವನುವಾಟು ದೇಶವು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ದೇಶದಲ್ಲಿ ಒಂದು ವಾರದಲ್ಲಿ 24.7 ಗಂಟೆಗಳ ಕೆಲಸವನ್ನು ನಿಗದಿಪಡಿಸಲಾಗಿದೆ. ಅಂದರೆ ಇಲ್ಲಿ ದಿನಕ್ಕೆ ಮೂರೂವರೆ ಗಂಟೆ ಮಾತ್ರ ಕೆಲಸ ಮಾಡಬೇಕು.
ಕಿರಿಬಾಟಿ ದೇಶದಲ್ಲಿ, ಒಂದು ವಾರದಲ್ಲಿ ಒಟ್ಟು ಕೆಲಸದ ಸಮಯವನ್ನು 27.3 ಗಂಟೆಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಇಲ್ಲಿನ ಉದ್ಯೋಗಸ್ಥರು ದಿನಕ್ಕೆ ಕೇವಲ ನಾಲ್ಕು ಗಂಟೆ ಮಾತ್ರ ಕಚೇರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಲ್ಲಿಯೂ ಸಹ ಜನರು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಏಕೆಂದರೆ ದೇಶವು ತಮ್ಮ ಕೌಶಲ್ಯ ಮತ್ತು ಸೌಕರ್ಯ ಎರಡಕ್ಕೂ ಪ್ರಾಮುಖ್ಯತೆಯನ್ನು ನೀಡಿದೆ ಎಂಬುದನ್ನು ಉದ್ಯೋಗಿಗಳು ಅರಿತುಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಮೊಜಾಂಬಿಕ್ ದೇಶವು ಮೂರನೇ ಸ್ಥಾನದಲ್ಲಿದೆ. ಇಲ್ಲಿ ವಾರದಲ್ಲಿ 28.6 ಗಂಟೆಗಳು ಕೆಲಸ ಮಾಡಬೇಕು. ರುವಾಂಡಾದಲ್ಲಿ ಒಂದು ವಾರಕ್ಕೆ 28.8 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ನಿಯಮವಿದೆ.
ಇನ್ನು ಆಸ್ಟ್ರಿಯಾದಲ್ಲಿ ಒಂದು ವಾರದಲ್ಲಿ ಉದ್ಯೋಗಿಗಳಿಗೆ ಕೆಲಸದ ಮಿತಿ 29.5 ಗಂಟೆಗಳು. ಇಥಿಯೋಪಿಯಾದಲ್ಲಿ ಒಂದು ವಾರದ ಕೆಲಸದ ಅವಧಿ 29.8 ಗಂಟೆಗಳು. ನಂತರದ ಸ್ಥಾನದಲ್ಲಿರೋ ಸೋಮಾಲಿಯಾದಲ್ಲಿ ವಾರಕ್ಕೆ 30.1 ಗಂಟೆ ಕೆಲಸ ಮಾಡಬೇಕು.
ಬಹುತೇಕ ಎಲ್ಲಾ ದೇಶಗಳಲ್ಲಿ ರಜೆಯ ಸೌಲಭ್ಯವೂ ಇದೆ. ಡೆನ್ಮಾರ್ಕ್‌ನಲ್ಲಿ ಕಚೇರಿಯ ಕೆಲಸದ ಸಮಯವನ್ನು ಮಹಿಳೆಯರು ಮತ್ತು ಪುರುಷರ ಅಗತ್ಯಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಇಲ್ಲಿ ಪುರುಷರಿಗೆ ಒಂದು ವಾರದ ಕೆಲಸದ ಸಮಯ 33.1 ಗಂಟೆಗಳಾಗಿದ್ದರೆ, ಮಹಿಳೆಯರಿಗೆ ಕೆಲಸದ ಸಮಯ 29.5 ಗಂಟೆಗಳು.
ಭಾರತದಲ್ಲಂತೂ ಕೆಲಸದ ಅವಧಿ ಇಷ್ಟು ಕಡಿಮೆಯಿಲ್ಲ. ದಿನಕ್ಕೆ ಕನಿಷ್ಠ 8 ಗಂಟೆ ಕೆಲಸ ಮಾಡಲೇಬೇಕು. ಹಾಗಾಗಿ ದಿನಕ್ಕೆ ಬರೀ 3 ಗಂಟೆ ಕೆಲಸ ಮಾಡುವ ದೇಶಗಳ ಉದ್ಯೋಗಿಗಳನ್ನು ನೋಡಿ ಇಲ್ಲಿನ ಜನರು ಹೊಟ್ಟೆಕಿಚ್ಚುಪಡುವಂತಾಗಿದೆ.