ನಿಮ್ಮ ಬಳಿ 2000 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಕೂಡಲೇ ಅವುಗಳನ್ನು ವಿನಿಮಯ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಕೂಡ ಜಮಾ ಮಾಡಬಹುದು. ಇನ್ನು 3 ದಿನಗಳು ಕಳೆದರೆ 2000 ರೂಪಾಯಿ ನೋಟುಗಳು ವ್ಯರ್ಥವಾಗಲಿವೆ.
ಯಾಕಂದ್ರೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಲು ಕೇವಲ 3 ದಿನಗಳು ಬಾಕಿ ಇವೆ. 30 ಸೆಪ್ಟೆಂಬರ್ 2023 ರೊಳಗೆ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬೇಕು ಅಥವಾ ಠೇವಣಿ ಮಾಡಬೇಕು.
ಆರ್‌ಬಿಐ ಮಾಹಿತಿಯ ಪ್ರಕಾರ ಜನಸಾಮಾನ್ಯರ ಬಳಿ ಇರುವ ಸುಮಾರು 24,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ 19 ಮೇ 2023 ರಂದು 2000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. RBI ಪ್ರಕಾರ, ಮಾರ್ಚ್ 31, 2023 ರವರೆಗೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಇದು ಮೇ 19, 2023 ರಂದು 3.56 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.
ಸೆಪ್ಟೆಂಬರ್ 1 ರಂದು, ಆರ್‌ಬಿಐ ನೋಟುಗಳ ವಾಪಸಾತಿಗೆ ಸಂಬಂಧಿಸಿದ ಡೇಟಾವನ್ನು ಬಿಡುಗಡೆ ಮಾಡಿತ್ತು. ಈ ವೇಳೆ 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದವು. ಅಂದರೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳಲ್ಲಿ ಶೇ.93 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಇದರ ಹೊರತಾಗಿಯೂ ಶೇಕಡಾ 7ರಷ್ಟು ಅಂದರೆ 24,000 ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಇನ್ನೂ ವಾಪಸಾಗಿಲ್ಲ.
2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಸಮಯದಲ್ಲಿ, ಸೆಪ್ಟೆಂಬರ್ 30, 2023 ರ ನಂತರವೂ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಆರ್‌ಬಿಐ ಹೇಳಿತ್ತು. ಆದರೆ ಸೆಪ್ಟೆಂಬರ್ 30 ರ ನಂತರ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ವಿನಿಮಯ ಅಥವಾ ಠೇವಣಿಗಾಗಿ ಸ್ವೀಕರಿಸುತ್ತವೆಯೇ ಎಂಬುದನ್ನು ಆರ್‌ಬಿಐ ಹೇಳಿಲ್ಲ. 2023 ರ ಸೆಪ್ಟೆಂಬರ್ 30 ರೊಳಗೆ 2000 ರೂ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಆರ್‌ಬಿಐ ಜನಸಾಮಾನ್ಯರಿಗೆ ಪದೇ ಪದೇ ಮನವಿ ಮಾಡುತ್ತಿದೆ.