ಬೆಂಗಳೂರು: ಆನ್ಲೈನ್ ನಲ್ಲಿ ಮದುವೆ ಹೆಸರಲ್ಲಿ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಪ್ರವೀಣ್ ಎಂಬುವರಿಗೆ 32 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.
ವಾಟ್ಸಾಪ್ ನಲ್ಲಿ ಎಐ ರಚಿತ ಕಲರ್ ಕಲರ್ ಯುವತಿಯ ಫೋಟೋಗಳನ್ನು ವಂಚಕ ಕಳುಹಿಸಿದ್ದಾನೆ. ಅವುಗಳನ್ನು ನೋಡಿ ಮದುವೆಗೆ ಪ್ರವೀಣ್ ಒಪ್ಪಿದ್ದಾರೆ. ನಂತರ ಫೋನ್ ಕರೆ ಮಾಡಿ ಇಬ್ಬರು ಮಾತಾಡಿಕೊಂಡು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಸದ್ಯ ಕೇರಳದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಟಾರ್ಗೆಟ್ ಮುಗಿಸಿ ಬೆಂಗಳೂರಿಗೆ ಬಂದು ಭೇಟಿಯಾಗುತ್ತೇನೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ ಎಂದು ನಂಬಿಸಲಾಗಿದೆ. ವಂಚಕರ ಮಾತು ನಂಬಿದ ಪ್ರವೀಣ್ ಹಂತ ಹಂತವಾಗಿ 32 ಲಕ್ಷ ರೂ. ಜಮಾ ಮಾಡಿದ್ದಾರೆ. 32 ಲಕ್ಷ ದೋಚಿದ ವಂಚಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆಗೊಳಗಾದ ಪ್ರವೀಣ್ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.