ಬೆಂಗಳೂರು: ಭ್ರಷ್ಟ ಅಧಿಕಾರಿಗಳು ಆಫ್ ಲೈನ್ ನಲ್ಲಿ ಮಾತ್ರವಲ್ಲ ಆನ್ ಲೈನ್ ಮೂಲಕವೂ ಲಂಚಪಡೆಯುತ್ತಿದ್ದು, ಲೋಕಾಯುಕ್ತ ದಾಳಿ ವೇಳೆ ಬಯಲಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ನಗರಸಭೆ, ತಾಲೂಕು ಕಚೇರಿಗಳ ಮೇಲೆ ದಾಳಿ ನಡೆಸಿ ಬಳಿಕ ಮಾತನಾಡಿದ ಉಪಲೋಕಾಯುಕ್ತ ನ್ಯಾ.ವೀರಪ್ಪ, 14 ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದೇವೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಲವು ದಾಖಲೆಗಳು ಸಿಕ್ಕಿವೆ. ಅವುಗಳ ತನಿಖೆ ನಡೆಸಲಾಗುವುದು ಎಂದರು.
ಇನ್ನು ನೆಲಮಂಗಲ ನಗರಸಭೆ, ತಾಲೂಕು ಕಚೇರಿ ಮೇಲೆ ದಾಳಿ ನಡೆಸಿದ್ದೇವೆ. ನಗರಸಭೆ ಸಿಬ್ಬಂದಿಗಳು ಆನ್ ಲೈನ್ ಮೂಲಕ ಲಂಚಪಡೆದಿದ್ದಾರೆ. ಹಣದ ಮೂಲ ಕೇಳಿದರೆ ಬಾಯಿಬಿಡುತ್ತಿಲ್ಲ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಗಳಿಗೂ ಭೇಟಿ ಕೊಟ್ಟು ಪರಿಶೀಲಿಸಿದ್ದೇವೆ. ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಜನರು ಮುಂದೆ ಬಂದು ಮಾಹಿತಿ ನೀಡಿ. ಅನ್ಯಾಯವನ್ನು ಖಂಡಿಸಿ ಎಂದು ಹೇಳಿದರು.