ಹೈದರಾಬಾದ್: ತೆಲಂಗಾಣದ ವಾರಂಗಲ್ ನಗರದಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಯನ್ನು ಭೇದಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರಿಂದ 2 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಾರಂಗಲ್ ನಗರ ಪೊಲೀಸ್ ಕಮಿಷನರ್ ತರುಣ್ ಜೋಶಿ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳು ಅಂತರ್ ರಾಜ್ಯ ಆನ್‌ಲೈನ್ ಕ್ರಿಕೆಟ್ ಮತ್ತು ಮೂರು ಕಾರ್ಡ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತರಲ್ಲಿ ಒಬ್ಬ ಆರೋಪಿ ತೆಲಂಗಾಣ ಮೂಲದವನಾಗಿದ್ದರೆ, ಮತ್ತೊಬ್ಬ ಆರೋಪಿ ಮಹಾರಾಷ್ಟ್ರ ಮೂಲದವನು ಎಂದು ಗೊತ್ತಾಗಿದೆ. ಬಂಧಿತರಿಂದ ಏಳು ಮೊಬೈಲ್ ಫೋನ್‌ಗಳು, 43 ಪಾಸ್‌ಬುಕ್‌ಗಳು ಮತ್ತು ಕೆಲವು ಎಟಿಎಂ ಕಾರ್ಡ್‌ಗಳೊಂದಿಗೆ 2 ಕೋಟಿ ರೂ.ಗೂ ಹೆಚ್ಚಿನ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಅಕ್ರಮವಾಗಿ ಮೂರು ಕಾರ್ಡ್‌ಗಳ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.