ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ.
ಹೀಗೆ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಒದಗಿಸುವಲ್ಲಿ ಬಸಳೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹಕ್ಕೆ ತಂಪು ನೀಡುವ ಸೊಪ್ಪಾಗಿದ್ದು, ರಕ್ತ ಕೆಡುವುದರಿಂದ ಉಂಟಾಗುವ ಕುರದಂತಹ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.
ಅಡುಗೆಯಲ್ಲಿ ಬಸಳೆ ಸೊಪ್ಪನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ.
ಬಸಳೆ ಸೊಪ್ಪಿನ ಹಸಿ
ಬಸಳೆ ಸೊಪ್ಪನ್ನು ಬಳಸಿ ಸಲಾಡ್ ನಂತೆ ತಯಾರಿಸುವ ಈ ಅಡುಗೆಯನ್ನು ನೀವು ಬಿಸಿ-ಬಿಸಿ ಅನ್ನದ ಜೊತೆ ಹಾಗೂ ಪಲಾವ್ ಜೊತೆಗೂ ಬಳಸಿಕೊಳ್ಳಬಹುದು.
ಬೇಕಾಗುವ ಸಾಮಾಗ್ರಿ: ಉದ್ದಿನಬೇಳೆ, ಹಸಿಮೆಣಸು, ಎಣ್ಣೆ, ಸಾಸಿವೆ, ಸ್ವಲ್ಪ ಕಾಯಿತುರಿ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬಸಳೆ ಸೊಪ್ಪನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬಸಳೆ ಸೊಪ್ಪು ಸ್ವಲ್ಪ ಲೋಳೆಯಾಗುವ ಗುಣ ಹೊಂದಿರೋದರಿಂದ ಹೆಚ್ಚಿದ ಬಳಿಕ ತೊಳೆಯಬಾರದು. ಇದರಿಂದ ಸೊಪ್ಪಿನ ಪೋಷಕಾಂಶಗಳು ಕಡಿಮೆಯಾಗುತ್ತವೆ.
ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು, ಕಾಯ್ದ ಎಣ್ಣೆಯಲ್ಲಿ ಉದ್ದಿನಬೇಳೆ, ಹಸಿಮೆಣಸು, ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಬಳಿಕ ಇದಕ್ಕೆ ಹೆಚ್ಚಿದ ಬಸಳೆ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಸೊಪ್ಪಿನ ನೀರಿನಂಶ ಕಡಿಮೆಯಾಗುವರೆಗೂ ಹುರಿದು ತೆಗೆದಿರಿಸಬೇಕು. ಬಳಿಕ ಮಿಕ್ಸಿಯಲ್ಲಿ ಸ್ವಲ್ಪ ಕಾಯಿತುರಿ ಹಾಕಿ ರುಬ್ಬಿ ಹುರಿದ ಬಸಳೆ ಸೊಪ್ಪಿನ ಜೊತೆ ಸೇರಿಸಬೇಕು. ಇದಕ್ಕೆ ಸ್ವಲ್ಪ ಮೊಸರು ಸೇರಿಸಿ, ಉಪ್ಪು ಹಾಕಬೇಕು. ಈಗ ಬಸಳೆ ಸೊಪ್ಪಿನ ಹಸಿ ಸವಿಯಲು ಸಿದ್ದ. ಹಸಿ ಈರುಳ್ಳಿ ಇಷ್ಟಪಡುವವರು ಈರುಳ್ಳಿಯನ್ನು ಚಿಕ್ಕದಾಗಿ ಹಸಿಯೊಂದಿಗೆ ಸೇರಿಸಿಕೊಳ್ಳಬಹುದು.