ಬೆಂಗಳೂರು: ಕೆಂಪುಸುಂದರಿ ಟೊಮೆಟೊ ಬೆಲೆ ಏರಿಕೆಯಾಗಿ, ರೈತರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾಯ್ತು. ಈಗ ಈರುಳ್ಳಿ, ಬೆಳ್ಳುಳ್ಳಿ ಸರದಿ. ಟೊಮೆಟೊ ಬಳಿಕ ಒಂದೊಂದೆ ತರಕಾರಿ ಬೆಲೆಗಳು ಗಗನಮುಖಿಯಾಗುತ್ತಿವೆ.
ಬಂಗಾರದ ಬೆಲೆ ಬಂದಿದ್ದ ಟೊಮೆಟೊ ದರ ಈಗಷ್ಟೆ ಕುಸಿತ ಕಂಡಿದೆ. ಇದೀಗ ಈರುಳ್ಳಿ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಜಿ ಈರುಳ್ಳಿ ದರ 12-15 ರೂಪಾಯಿ ಹೆಚ್ಚಾಗಿದೆ. ಹೊಸ ಬೆಳೆ ಬರುವರೆಗೂ ಇದೇ ರೀತಿ ಬೆಲೆ ಏರಿಕೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ವಾರ ಕೆಜಿ ಈರುಳ್ಳಿ 25 ರೂಪಾಯಿ ಇದ್ದಿದ್ದು, ಈವಾರ 30-40 ರೂಪಾಯಿಗೆ ಏರಿಕೆಯಾಗಿದೆ. ಸೂಪರ್ ಮಾರ್ಕೆಟ್ ಗಳಲ್ಲಿ 45 ರೂಪಾಯಿಗೆ ಮಾರಾಟವಾಗುತ್ತಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಇತರೆಡೆಗಳಿಂದ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಸುಮಾರು 4000 ಹೆಕ್ಟೇರ್ ಬೆಳೆ ಕೊರತೆಯಾಗಿದೆ. ಮುಂಗಾರು ಮಳೆ ವಿಳಂಬವಾದ ಕಾರಣ 6-8 ವಾರ ಕಾಲ ಕೊಯ್ಲು ವಿಳಂಬವಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ಈರುಳ್ಳಿ ಉತ್ಪಾದನೆಯೇ ಕೊರತೆಯಾಗಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 50-60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗುತ್ತಿದ್ದು, ಕೆಜಿ ಬೆಳ್ಳುಳ್ಳಿಗೆ 200 ರೂಪಾಯಿ ಆಗಿದೆ. ಇನ್ನೂ ಒಂದು ತಿಂಗಳ ಕಾಲ ಬೆಳ್ಳುಳ್ಳಿ ಬೆಲೆ ಇದೇ ರೀತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.