ಬೆಂಗಳೂರು: ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮೊಬೈಲ್ ವ್ಯಾನ್ ಪರಿಚಯಿಸುತ್ತಿದ್ದು, ಸೋಮವಾರದಿಂದ ಚಾಲನೆ ದೊರೆಯಲಿದೆ.
ಬೆಲೆ ಏರಿಕೆ ನಿಯಂತ್ರಣ ಮತ್ತು ಕಾಳಸಂತೆಯಲ್ಲಿ ಅಕ್ರಮ ದಾಸ್ತಾನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮುಂದಾಗಿದೆ.
ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ(ಎನ್.ಸಿ.ಸಿ.ಎಫ್.) ಮೂಲಕ ಕೆಜಿಗೆ 35 ರೂಪಾಯಿ ದರದಲ್ಲಿ ಗ್ರಾಹಕರಿಗೆ ಈರುಳ್ಳಿ ಮಾರಾಟ ಮಾಡಲಾಗುವುದು. ದೆಹಲಿ. ಮುಂಬೈನಲ್ಲಿ ಈಗಾಗಲೇ ಮೊಬೈಲ್ ಬ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಬೆಂಗಳೂರಿನಲ್ಲಿಯೂ ಸೋಮವಾರ ಮಧ್ಯಾಹ್ನ 12:30 ರಿಂದ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಲಾಗುವುದು.
ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 50 -70 ರೂ.ವರೆಗೂ ಇದ್ದು, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ 35 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುವುದು ಎನ್ನಲಾಗಿದೆ.