ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ ಬೆಲೆ ಕೇಳಿದರೆ ಕಣ್ಣಿರು ಬರುವ ಸ್ಥಿತಿ ಎದುರಾಗಿದೆ. ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದ್ದು, ಶತಕದತ್ತ ದಾಪುಗಾಲಿಟ್ಟಿದೆ.
ಹಲವೆಡೆ ಕೆಜಿ ಈರುಳ್ಳಿ 70 ರೂ.ನಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಅಕಾಲಿಕ ಮಳೆ, ಬೆಳೆ ನಾಶದಿಂದಾಗಿ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಲು ಕಾರಣವಾಗಿದೆ.
ಕೆಲ ದಿನಗಳ ಹಿಂದಷ್ಟೇ ಏರಿಕೆಯಾಗಿದ್ದ ಈರುಳ್ಳಿ, ಬಳಿಕ ಮತ್ತೆ ದರ ಇಳಿಕೆಯಾಗಿತ್ತು. ಆದರೆ ಈಗ ಮತ್ತೆ ಈರುಳ್ಳಿ ದರ ದಿಢೀರ್ ಏರಿಕೆಯಾಗುತ್ತಿದೆ. ತರಕಾರಿ-ಹಣ್ಣುಗಳ ಬೆಲೆಯಲ್ಲಿಯೇ ಹೆಚ್ಚವಾಗಿದೆ. ಜನಸಾಮಾನ್ಯರು ಈರುಳ್ಳಿ, ತರಕಾರಿ, ಅಗತ್ಯ ವಸ್ತುಗಳನ್ನು ಕೊಳ್ಳುವುದು, ಜೀವನ ಸಾಗಿಸುವುದೇ ದುಸ್ತರವಾಗಿದೆ.
ರಾಜ್ಯದಲ್ಲಿ ಸದ್ಯ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆ ನೀರುಪಾಲಾಗಿದೆ. ರಕ್ಷಿಸಲ್ಪಟ್ಟ ಈರುಳ್ಳಿಗಳು ಕೊಳೆತು ಹೋಗುತ್ತಿವೆ. ಇದರಿಂದಾಗಿ ಈರುಳ್ಳಿ ಪೂರೈಕೆ ಕೊರತೆಯಾಗಿದ್ದು, ಬೆಲೆ ಏರಿಕೆಯಾಗಿದೆ.
ಬೆಂಗಳೂರಿನ ಕೆಲವೆಡೆ ಕೆಜಿ ಈರುಳ್ಳಿ 50-60 ರೂ ಇದ್ದರೆ ಹಲವೆಡೆ 70-80 ರೂಪಾಯಿಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಮಳೆಯಿಂದಾಗಿ ಹಾನಿಯಾಗಿದೆ. ಮಹಾರಾಷ್ಟ್ರದಿಂದಲೂ ಸರಿಯಾದ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಇನ್ನು ಕೆಲದಿಗಳವರೆಗೆ ಈರುಳ್ಳಿ ದರ ಇನ್ನಷ್ಟು ಏರಿಕೆಯಾಗಲಿದ್ದು 100ರೂ ಗಡಿ ತಲುಪಿದರೂ ಅಚ್ಚರಿಯಿಲ್ಲ.