ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಜಿಗೆ 35 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಆರಂಭಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿದ್ದು, ಗುಣಮಟ್ಟ ಆಧರಿಸಿ ಕೆಜಿಗೆ 60 ರಿಂದ 70 ರೂ.ವರೆಗೆ ತಲುಪಿದೆ. ಸರ್ಕಾರದ ಗೋದಾಮಗಳಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಲಭ್ಯವಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ದರ ಹೆಚ್ಚಳದ ಹೊರೆ ಇಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದೆ.
ಹೈದರಾಬಾದ್, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಭುವನೇಶ್ವರ, ಅಹ್ಮದಾಬಾದ್ ನಲ್ಲಿ ಮುಂದಿನ ವಾರದಿಂದ ಆನ್ಲೈನ್ ಮೂಲಕ ಈರುಳ್ಳಿ ಮಾರಾಟ ಆರಂಭವಾಗಲಿದೆ. ಭಾರತ ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟ ಪ್ರಸ್ತುತ ದೆಹಲಿ, ಮುಂಬೈ, ನೋಯ್ಡಾ, ಗಾಜಿಯಾಬಾದ್ ಭಾಗದ ಒಟ್ಟು 24 ಪ್ರದೇಶಗಳಲ್ಲಿ ಮೊಬೈಲ್ ವ್ಯಾನ್ ಗಳ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.
ಅತಿವೃಷ್ಟಿ ಮೊದಲಾದ ಕಾರಣದಿಂದ ಹಲವೆಡೆ ಈರುಳ್ಳಿ ಬೆಳೆ ಹಾಳಾಗಿದೆ. ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.