ಕಲಬುರಗಿ: ಬೆಲೆ ಏರಿಕೆಯಿಂದ ಕೆಲವು ತಿಂಗಳ ಹಿಂದೆಯಷ್ಟೇ ಗ್ರಾಹಕರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಈಗ ದರ ಕುಸಿತದ ನಂತರ ರೈತರಲ್ಲಿ ಕಣ್ಣೀರು ತರಿಸುತ್ತಿದೆ.
ಎರಡು ಮೂರು ತಿಂಗಳ ಹಿಂದೆಯಷ್ಟೇ ಕೆಜಿಗೆ 100 ರೂಪಾಯಿವರೆಗೂ ಇದ್ದ ಈರುಳ್ಳಿ ದರ ಈಗ 100 ರೂಪಾಯಿಗೆ 5 ಕೆಜಿಯಂತೆ ಮಾರಾಟವಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ತಿಂಗಳ ಹಿಂದೆ ಕ್ವಿಂಟಾಲ್ ಈರುಳ್ಳಿ ದರ 4000 ರೂ.ವರೆಗೂ ಇತ್ತು. ಈಗ ಒಂದು ಸಾವಿರ ರೂಪಾಯಿ ದರ ಇದೆ.
ಸಣ್ಣ ಗಾತ್ರದ ಈರುಳ್ಳಿ ಕೆಜಿಗೆ 10 ರುಪಾಯಿ, ಮಧ್ಯಮ ಮತ್ತು ದೊಡ್ಡ ಗಾತ್ರದ ಈರುಳ್ಳಿ ಕೆಜಿಗೆ 15 ರಿಂದ 20 ರೂಪಾಯಿವರೆಗೂ ಮಾರಾಟವಾಗುತ್ತಿದೆ. ರೈತರಿಗೆ ಕೆಜಿಗೆ ಕನಿಷ್ಠ 10 ರೂಪಾಯಿಯೂ ಸಿಗುತ್ತಿಲ್ಲ. ಹೆಚ್ಚಿನ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಈರುಳ್ಳಿ ಬೆಳೆಯಲು ಹೆಚ್ಚಿನ ಹಣ ಖರ್ಚು ಮಾಡಿ, ಮಾರುಕಟ್ಟೆಗೆ ಸಾಗಣೆ ದರ, ಕೂಲಿ, ಬೀಜ, ಗೊಬ್ಬರ ಇವೆಲ್ಲವೂ ಸೇರಿ ರೈತರಿಗೆ ಭಾರಿ ಖರ್ಚಾಗುತ್ತದೆ. ಆದರೆ, ದರ ಇಳಿಕೆಯಿಂದ ರೈತರಲ್ಲಿ ಈರುಳ್ಳಿ ಕಣ್ಣೀರು ತರಿಸಿದೆ.