ಅಡುಗೆ ಮನೆಯಲ್ಲಿ ಈರುಳ್ಳಿಯ ಕಾರು ಬಾರು ದೊಡ್ಡದು. ಬಹುತೇಕ ಎಲ್ಲಾ ಬಗೆಯ ಸಾಂಬಾರು, ಪಲ್ಯಗಳಿಗೆ ಈರುಳ್ಳಿಯನ್ನು ಬಳಸಿದರೆ ಸಿಗುವ ರುಚಿಯೇ ಬೇರೆಯದು. ಅದರ ಹೊರತಾಗಿ ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ ?
ತರಕಾರಿ ಕತ್ತರಿಸುವ ಕತ್ತರಿ ಅಥವಾ ಚಾಕು ತುಕ್ಕು ಹಿಡಿದಿದ್ದರೆ ಒಂದು ತುಂಡು ಈರುಳ್ಳಿಯನ್ನು ಈ ಭಾಗಕ್ಕೆ ಗಟ್ಟಿಯಾಗಿ ಉಜ್ಜಿ. ಇದರಿಂದ ಕತ್ತಿಯ ಮೇಲಿನ ತುಕ್ಕು ನಿವಾರಣೆಯಾಗುತ್ತದೆ.
ಜೇನುನೊಣ ಕಚ್ಚಿದ ಜಾಗಕ್ಕೆ ಈರುಳ್ಳಿ ರಸ ಹಿಂಡಿದರೆ ನೋವು ಹಾಗೂ ಉರಿ ಬಹಳ ಬೇಗ ಕಡಿಮೆಯಾಗುತ್ತದೆ. ಚಿನ್ನವನ್ನು ತೊಳೆಯಲು ಈರುಳ್ಳಿಯನ್ನು ಬಳಸಬಹುದು. ಇದನ್ನು ಜಜ್ಜಿ ಅದೇ ಭಾಗದಿಂದ ಆಭರಣವನ್ನು ತಿಕ್ಕಿದರೆ ಅದರಿಂದ ಕೊಳೆ ದೂರವಾಗಿ ಚಿನ್ನ ಹೊಳಪು ಪಡೆದುಕೊಳ್ಳುತ್ತದೆ.
ಕೋಣೆಗೆ ಹೊಸದಾಗಿ ಪೇಂಟ್ ಮಾಡಿಸಿದ್ದರೆ ಅದರ ವಾಸನೆ ನಿಮಗೆ ತಲೆನೋವು ತರಬಹುದು. ಹಾಗಾದಾಗ ಒಂದು ಬಟ್ಟಲು ನೀರಿನಲ್ಲಿ ಅರ್ಧ ತುಂಡು ಕತ್ತರಿಸಿದ ನೀರುಳ್ಳಿಯನ್ನು ಹಾಕಿಡಿ. ಕೆಲವೇ ಕ್ಷಣಗಳನ್ನು ಅದು ವಾಸನೆಯನ್ನು ಹೀರಿಕೊಳ್ಳುತ್ತದೆ.