ಬೆಳಗಾವಿ: ಈರುಳ್ಳಿ ದರ ನಿಗದಿಯಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ಈರುಳ್ಳಿ ಬೆಳೆಗಾರರು ಎಪಿಎಂಸಿ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಈರುಳ್ಳಿ ದರ ನಿಗದಿಯಲ್ಲಿ ದಲ್ಲಾಳಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ. ದಲ್ಲಾಳಿಗಳ ಮೋಸದಾಟಕ್ಕೆ ರೈತರಿಗೆ ಅನ್ಯಾಯವಾಗುತ್ತಿದೆ. ನ್ಯಾಯ ನೀಡಬೇಕು ಎಂದು ಆಗ್ರಹಿಸಿ ರೈತರು ಎಪಿಎಂಸಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆಯಿಂದಾಗಿ ಎಪಿಎಂಸಿ ಗೇಟ್ ಹೊರಭಾಗದಲ್ಲಿ ನೂರಾರು ಲಾರಿಗಳು ಸಾಲು ಸಾಲಾಗಿ ನಿಲ್ಲುವಂತಾಗಿದೆ. ತಕ್ಷಣ ಎಚ್ಚೆತ್ತ ಎಪಿಎಂಸಿ ಅಧಿಕಾರಿಗಳು ರೈತರ ಸಭೆ ನಡೆಸಿ ಸಮಾಧಾನ ಮಾಡಲು ಯತ್ನಿಸಿದರು. ದಲ್ಲಾಳಿಗಳ ಮೋಸದಿಂದಾಗಿ ಈರುಳ್ಳಿ ಬೆಳೆಗಾರರಿಗೆ ವಾರದಿಂದ ವಾರಕ್ಕೆ 2-3 ಸಾವಿರ ರೂಪಾಯಿ ದರ ವ್ಯತ್ಯಾಸವಾಗುತ್ತಿದ್ದೆ. ಕಳೆದವಾರ ಕ್ವಿಂಟಾಲ್ ಈರುಳ್ಳಿ 5000 ರೂಗೆ ಮಾರಾಟವಾಗಿದ್ದು, ಈ ವಾರ 2,500 ರೂಗೆ ಮಾರಾಟವಾಗಿದೆ. ಈ ರೀತಿ ಆದರೆ ಈರುಳ್ಳಿ ಬೆಳೆಗಾರರ ಗತಿಯೇನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.