ನವದೆಹಲಿ: ಬೆಲೆ ಏರಿಕೆ ನಿಯಂತ್ರಣ, ಸ್ಥಳೀಯವಾಗಿ ಈರುಳ್ಳಿ ಲಭ್ಯತೆ ಹೆಚ್ಚಿಸುವ ಉದ್ದೇಶದಿಂದ ಮಾರ್ಚ್ 31ರವರೆಗೆ ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧ ಮುಂದುವರೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿ, ಈರುಳ್ಳಿ ಮೇಲಿನ ರಫ್ತು ನಿಷೇಧ ಹಿಂಪಡೆಯಲಾಗಿದೆ ಎನ್ನುವ ವದಂತಿಗಳಿಗೆ ಕಿವಿಗೊಡಬೇಡಿ. ರಫ್ತು ನಿಷೇಧ ಜಾರಿಯಲ್ಲಿದ್ದು, ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹಿಂಪಡೆದಿದೆ ಎನ್ನುವ ವದಂತಿಯಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಎರಡೇ ದಿನದಲ್ಲಿ ಶೇಕಡ 40.62ರಷ್ಟು ಏರಿಕೆಯಾಗಿದೆ. ಕೇಂದ್ರದಿಂದ ಈರುಳ್ಳಿ ರಫ್ತು ನಿಷೇಧ ಮಾರ್ಚ್ 31ರ ವರೆಗೂ ಮುಂದುವರೆಯುವ ಬಗ್ಗೆ ಸ್ಪಷ್ಟನೆ ನೀಡಿದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಡಿಮೆಯಾಗಿದೆ.