ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಣಮಟ್ಟದ ಈರುಳ್ಳಿ ದರ ಕೆಜಿಗೆ 80 ರೂಪಾಯಿ ಇದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ದೇಶದಲ್ಲಿ ಈರುಳ್ಳಿ ದರ ಕೆಜಿಗೆ ಸರಾಸರಿ 50 ರೂಪಾಯಿ ಇದ್ದು, ದೆಹಲಿಯಲ್ಲಿ ಗರಿಷ್ಟ ದರ 80 ರೂಪಾಯಿ, ಕನಿಷ್ಠ ದರ 27 ರೂ. ಇದೆ. ಸರಾಸರಿ ದರ 58 ರೂಪಾಯಿ ಇದೆ. ಸುಮಾರು 38 ಲಕ್ಷ ಟನ್ ಈರುಳ್ಳಿ ರೈತರು ಮತ್ತು ವರ್ತಕರ ಬಳಿ ದಾಸ್ತಾನು ಇದ್ದು, ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಪೂರೈಕೆ ಕೊರತೆಯಿಂದ ದರ ಹೆಚ್ಚಳವಾಗಿದೆ. ಮುಂಗಾರು ಮಳೆ ಉತ್ತಮವಾಗಿರುವುದರಿಂದ ಈ ಬಾರಿ ದೇಶಾದ್ಯಂತ 2.9 ಲಕ್ಷ ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಪೂರೈಕೆ ಹೆಚ್ಚಾಗಿ ಬೆಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
ಈರುಳ್ಳಿ ದರ ಏರಿಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ NCCF, ನಾಫೆಡ್ ಮಳಿಗೆಗಳಲ್ಲಿ ಕೆಜಿಗೆ 35 ರೂಪಾಯಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕ್ರಮ ಕೈಗೊಂಡಿದೆ. 4.7 ಲಕ್ಷ ಟನ್ ಈರುಳ್ಳಿಯನ್ನು ಗೋದಾಮುಗಳಿಂದ ಬಿಡುಗಡೆ ಮಾಡಲಾಗಿದೆ. ಸಬ್ಸಿಡಿ ದರದಲ್ಲಿ ಕೆಜಿಗೆ 35 ರೂ.ನಂತೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.