ದೇಶದಲ್ಲಿ ಮೂವರಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮತ್ತೊಂದು ಆಶ್ಚರ್ಯಕರ ವಿಚಾರ ಎಂದರೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂಶವು ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿದುಬಂದಿದೆ.
2019ರ ದತ್ತಾಂಶದ ಪ್ರಕಾರ 30 ಪ್ರತಿಶತ ಮಹಿಳೆಯರು ಹಾಗೂ 32 ಪ್ರತಿಶತ ಪುರಷರು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಲ್ಲ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆದರೆ ರಕ್ತದೊತ್ತಡದ ಚಿಕಿತ್ಸೆಯ ವಿಚಾರಕ್ಕೆ ಬಂದರೆ 35 ಪ್ರತಿಶತ ಮಹಿಳೆಯರು ಹಾಗೂ 25 ಪ್ರತಿಶತ ಪುರುಷರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯರಿಗೆ ಹೋಲಿಸಿದರೆ ಸಾಮಾನ್ಯವಾಗಿ ಪುರುಷರೇ ಹೆಚ್ಚಾಗಿ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಾರೆ. ಆದರೆ ಅಧಿಕ ರಕ್ತದೊತ್ತಡ ವಿಚಾರದಲ್ಲಿ ಮಾತ್ರ ಪುರುಷ ಹಾಗೂ ಮಹಿಳೆಯರ ನಡುವೆ 10 ಪ್ರತಿಶತ ವ್ಯತ್ಯಾಸ ಕಂಡು ಬಂದಿರೋದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎಂದು ಲ್ಯಾನ್ಸೆಟ್ ಅಧ್ಯಯನದ ಸಹ ಲೇಖಕಿ ಅವುಳಾ ಲಕ್ಷ್ಮಯ್ಯ ಹೇಳಿದ್ದಾರೆ.
ಇನ್ನು ಮಹಿಳೆಯರೇ ರಕ್ತದೊತ್ತಡಕ್ಕೆ ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಿರೋದಕ್ಕೆ ಕಾರಣವನ್ನೂ ಈ ಅಧ್ಯಯನವು ಬಹಿರಂಗ ಪಡಿಸಿದೆ. ಮಹಿಳೆಯರು ಗರ್ಭಿಣಿಯಾಗಿದ್ದ ವೇಳೆ ಕಡ್ಡಾಯವಾಗಿ ರಕ್ತದೊತ್ತಡ ಪರೀಕ್ಷೆಯನ್ನು ಮಾಡಿಸಿಕೊಳ್ತಾರೆ. ಹೀಗಾಗಿ ಅವರು ವೈದ್ಯಕೀಯ ಆರೈಕೆ ಪಡೆದುಕೊಳ್ತಾರೆ. ಆದರೆ ಪುರುಷರಿಗೆ ರಕ್ತದೊತ್ತಡ ಪರೀಕ್ಷೆ ಮಾಡುವ ಅನಿವಾರ್ಯತೆ ಇರೋದಿಲ್ಲ ಎಂದು ಹೇಳಿದೆ.