ಕಂಚಿ ಕಾಮಾಕ್ಷಿ ಅದ್ಭುತ ಶಕ್ತಿಪೀಠಗಳಲ್ಲಿ ಒಂದು. ಇಲ್ಲಿ ಶಿವ ಶಕ್ತಿಯಲ್ಲಿ ಸಂಯೋಜನೆಗೊಂಡು ಶಿವಶಕ್ತಿಯ ಪ್ರಭಾವವಿರುವ ಶಕ್ತಿಪೀಠ. ಕಾಮಾಕ್ಷಿ ಎನ್ನುವುದು ಮೂರು ಪದಗಳ ಸಂಯೋಜನೆಯಾಗಿದೆ. ಕಾ ಮಾ ಅಕ್ಷಿ. ಇಲ್ಲಿ ಕಾ ಪದವು ಸರಸ್ವತಿ ದೇವಿಯನ್ನು, ಮಾ ಪದವು ಲಕ್ಷ್ಮಿಯನ್ನು ಹಾಗೂ ಅಕ್ಷಿ ಕಣ್ಣುಗಳನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಕಾಮಾಕ್ಷಿಯ ಇನ್ನೊಂದು ಭಾವಾರ್ಥ ಕಾಮ + ಅಕ್ಷಿ ಅಂದರೆ ಪ್ರೀತಿ + ಕಣ್ಣುಗಳು.
ಕಾಮಾಕ್ಷಿಯು ನೆಲೆಸಿರುವ ಪುಣ್ಯ ಕ್ಷೇತ್ರವೇ ಕಾಂಚೀಪುರ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಾಂಚೀಪುರಂ ನಗರದ ಹೃದಯ ಭಾಗದಲ್ಲಿ ಕಾಮಾಕ್ಷಿಯ ದೇವಾಲಯವಿದೆ. ಈ ಪುರಾತನ ದೇವಾಲಯವು ಪಲ್ಲವರಿಂದ ನಿರ್ಮಿತವಾದ ರಚನೆಯೆಂದು ತಿಳಿಯಲಾಗಿದೆ.
ಏಕೆಂದರೆ ಕಾಂಚೀಪುರಂ ಹಿಂದೆ ಪಲ್ಲವರ ರಾಜಧಾನಿ ಪಟ್ಟಣವಾಗಿತ್ತು. ವಿಶೇಷವೆಂದರೆ ಕಾಮಾಕ್ಷಿಯು ಇಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕುಳಿತಿದ್ದು ನೋಡಲು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತಾಳೆ.
ಚೆನ್ನೈ ಮಹಾನಗರದಿಂದ ಕೇವಲ 72 ಕಿ.ಮೀ. ಗಳಷ್ಟು ದೂರದಲ್ಲಿರುವ ಕಂಚಿಗೆ ತೆರಳಲು ಚೆನ್ನೈ ನಗರದ ಕೇಂದ್ರ ಬಸ್ಸು ನಿಲ್ದಾಣದಿಂದ ಸಾಕಷ್ಟು ಬಸ್ಸುಗಳು ಲಭ್ಯವಿದೆ.