ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ 22ನೇ ಕಾನೂನು ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ.
‘ಒನ್ ನೇಷನ್, ಒನ್ ಎಲೆಕ್ಷನ್’ ಐದು ವರ್ಷದ ಬಳಿಕ ಜಾರಿಗೆ ಕಾನೂನು ಆಯೋಗ ಶಿಫಾರಸು ಮಾಡಿದ್ದು, ಸರ್ಕಾರಕ್ಕೆ ಇಂದು ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳ ಜೊತೆಗೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
2029 ರ ಚುನಾವಣೆಯಲ್ಲಿ ಒನ್ ನೇಶನ್ ಒನ್ ಎಲೆಕ್ಷನ್ ಜಾರಿಗೆ ಮುಂದಾಗಬಹುದೆಂಬ ಶಿಫಾರಸಿನೊಂದಿಗೆ ಕಾನೂನು ಆಯೋಗ ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಮುಂದಿನ ಐದು ವರ್ಷಗಳ ಕಾಲ ಸಾಧ್ಯವಾದಷ್ಟು ಚುನಾವಣೆಗಳನ್ನು ಒಟ್ಟಿಗೆ ನಡೆಸುವಂತೆ ನೋಡಿಕೊಳ್ಳಬೇಕು. 2020ರ ವೇಳೆಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಿಕ ಚುನಾವಣಾ ಪದ್ಧತಿ ಜಾರಿಗೊಳಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಕಾನೂನು ಆಯೋಗ ಶಿಫಾರಸು ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
2024ರ ಚುನಾವಣೆಗೆ ‘ಒಂದು ದೇಶ ಒಂದು ಚುನಾವಣೆ’ ಅನುಷ್ಠಾನ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿ ಹಾಕಿದ್ದು, ಇಂದು ಕೇಂದ್ರ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸುವ ಸಾಧ್ಯತೆ ಇದೆ. ನಂತರ ಈ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ವಿಶೇಷ ಸಮಿತಿಗೆ ಸಲ್ಲಿಸಲಿದ್ದು, ಎಲೆಕ್ಷನ್ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸಿದೆ.
ಕಳೆದ ಶನಿವಾರ ಈ ಸಮಿತಿ ಮೊದಲ ಸಭೆ ನಡೆಸಿ ಚರ್ಚಿಸಿದ್ದು, ಕಾನೂನು ಆಯೋಗದ ವರದಿಯನ್ನು ಈ ಸಮಿತಿ ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗ ಫೆಬ್ರವರಿಯಿಂದ ವಿವಿಧ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಶಿಕ್ಷಣ, ರಾಜಕೀಯ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದೆ. ಎಲ್ಲಾ ಪಕ್ಷಗಳು ಒನ್ ನೇಷನ್ ಒನ್ ಎಲೆಕ್ಷನ್ ಪರವಾಗಿ ಇಲ್ಲ ಎನ್ನಲಾಗಿದೆ.