ನವದೆಹಲಿ: ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್‌ಡಿಎ ಸರ್ಕಾರವು ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು ಯೋಜಿಸಿದೆ.
ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿಯು ಲೋಕಸಭೆ ಚುನಾವಣೆಯನ್ನು ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೊಂದಿಗೆ ನಡೆಸುವ ಗುರಿ ಹೊಂದಿದೆ.
ಪ್ರಸ್ತುತ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ಸೇರಿದಂತೆ ಕೆಲವು ರಾಜ್ಯಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿಯೇ ಮತದಾನ ಮಾಡುತ್ತವೆ. ಇತರೆಡೆ ಪ್ರತ್ಯೇಕ ಚುನಾವಣೆ ನಡೆಯುತ್ತದೆ.
ಇದು ಆಗಾಗ ಚುನಾವಣೆಗಳನ್ನು ನಡೆಸುವಲ್ಲಿ ಒಳಗೊಂಡಿರುವ ಬೃಹತ್ ಹಣಕಾಸಿನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಆಡಳಿತ ಪಕ್ಷವು ಹೇಳಿಕೊಂಡಿದೆ. ಆದರೆ ಅವರ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ಮತ್ತು ಟೀಕೆ ವ್ಯಕ್ತವಾಗಿದೆ.