ನವದೆಹಲಿ: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವನ್ನು ಬಲವಾಗಿ ವಿರೋಧಿಸಿರುವ ಕಾಂಗ್ರೆಸ್ ಇದು ಒಕ್ಕೂಟ ವ್ಯವಸ್ಥೆ, ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಒಂದು ದೇಶ ಒಂದು ಚುನಾವಣೆ ವಿಚಾರವನ್ನು ಕೈಬಿಡಬೇಕು. ಈ ನಿಟ್ಟಿನಲ್ಲಿ ರಚಿಸಲಾಗಿರುವ ಉನ್ನತಾಧಿಕಾರ ಸಮಿತಿಯನ್ನು ವಿಸರ್ಜಿಸಬೇಕೆಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ ಸಮಿತಿಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ವ್ಯಕ್ತಿತ್ವ ಮತ್ತು ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು “ಉಲ್ಲಂಘಿಸಲು” ಕೇಂದ್ರ ಸರ್ಕಾರವು “ದುರುಪಯೋಗಪಡಿಸಿಕೊಳ್ಳಲು” ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ..
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಕಲ್ಪನೆಯನ್ನು ಬಲವಾಗಿ ವಿರೋಧಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ, ದೃಢವಾದ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು, ಸಂಪೂರ್ಣ ಆಲೋಚನೆ ಕೈಬಿಡುವುದು ಮತ್ತು ಉನ್ನತ ಅಧಿಕಾರದ ಸಮಿತಿ ವಿಸರ್ಜಿಸುವುದು ಅನಿವಾರ್ಯವಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.