ಖ್ಯಾತ ಗಾಯಕ ಉದಿತ್ ನಾರಾಯಣ್ ವೇದಿಕೆಯಲ್ಲಿ ಅಭಿಮಾನಿಗಳಿಗೆ ಚುಂಬಿಸುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಲ ದಿನಗಳ ಹಿಂದೆ ಕೂಡ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಗಾಯಕನ ನಡೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ವೈರಲ್ ಆಗಿದ್ದ ವಿಡಿಯೋದಲ್ಲಿ ಉದಿತ್ ನಾರಾಯಣ್ ಹಲವಾರು ಮಹಿಳಾ ಅಭಿಮಾನಿಗಳ ಕೆನ್ನೆಗೆ ಚುಂಬಿಸಿದ್ದರು. ಆದರೆ, ಒಬ್ಬ ಅಭಿಮಾನಿಗೆ ತುಟಿಯ ಮೇಲೆ ಚುಂಬಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಗಾಯಕ ತೀವ್ರ ಟೀಕೆಗೆ ಗುರಿಯಾಗಿದ್ದರು.
ಇದೀಗ ಮತ್ತೊಂದು ವಿಡಿಯೋದಲ್ಲಿ ಅವರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಭಿಮಾನಿಗಳಿಗೆ ಚುಂಬಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದ್ದು, “ಉದಿತ್ ನಾರಾಯಣ್ ಅವರ ಮತ್ತೊಂದು ವಿಡಿಯೋ” ಎಂದು ಬರೆಯಲಾಗಿದೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಇವರು ನಿಜಕ್ಕೂ ಬೇರೆಯೇ ತರಹದ ವ್ಯಕ್ತಿ” ಎಂದು ಕೆಲವರು ಹೇಳಿದ್ದಾರೆ. “ಇದು ಸರಿಯಲ್ಲ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ಇವರೊಬ್ಬ ದೊಡ್ಡ ಅನುಭವಿ ಗಾಯಕ, ಇಂತಹ ಕೆಲಸ ಮಾಡಬಾರದು” ಎಂದು ಇನ್ನೂ ಕೆಲವರು ಟೀಕಿಸಿದ್ದಾರೆ.
ಈ ಹಿಂದೆ ವೈರಲ್ ಆಗಿದ್ದ ವಿಡಿಯೋ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯಿಸಿ, “ಅಭಿಮಾನಿಗಳು ತುಂಬಾ ಹುಚ್ಚರಾಗಿರುತ್ತಾರೆ. ನಾವು ಹಾಗೆಲ್ಲಾ ಮಾಡುವುದಿಲ್ಲ. ಕೆಲವರು ಇದನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಈ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದನ್ನು ದೊಡ್ಡ ವಿಷಯವನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಅಲ್ಲಿ ಸಾವಿರಾರು ಜನರು ಇರುತ್ತಾರೆ ಮತ್ತು ನಮ್ಮ ಬಳಿ ಅಂಗರಕ್ಷಕರೂ ಇರುತ್ತಾರೆ. ಅಭಿಮಾನಿಗಳಿಗೆ ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದುಕೊಳ್ಳುತ್ತಾರೆ, ಕೆಲವರು ಕೈಕುಲುಕಲು ಮುಂದಾಗುತ್ತಾರೆ, ಇನ್ನು ಕೆಲವರು ಕೈಗೆ ಮುತ್ತಿಡುತ್ತಾರೆ. ಇದೆಲ್ಲಾ ಹುಚ್ಚುತನ. ಇದಕ್ಕೆ ಹೆಚ್ಚು ಗಮನ ಕೊಡಬಾರದು” ಎಂದು ಹೇಳಿದ್ದರು.
ಈ ಘಟನೆಯ ನಂತರ, ಉದಿತ್ ನಾರಾಯಣ್ ಇತರ ಅಭಿಮಾನಿಗಳಿಗೆ ಮತ್ತು ಸಹ ಗಾಯಕರಾದ ಅಲ್ಕಾ ಯಾಗ್ನಿಕ್ ಮತ್ತು ಶ್ರೇಯಾ ಘೋಶಾಲ್ ಅವರಂತಹ ಗಾಯಕಿಯರಿಗೆ ಚುಂಬಿಸುತ್ತಿರುವ ವಿಡಿಯೋಗಳು ಸಹ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಈ ಘಟನೆಗಳು ಅಭಿಮಾನಿಗಳೊಂದಿಗಿನ ಅವರ ವರ್ತನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Another video of Udit Narayan pic.twitter.com/dYGWgPfUHl
— Savage SiyaRam (@SavageSiyaram) February 5, 2025