ಐಸಿಎಂಆರ್ ನಡೆಸಿದ ಹೊಸ ಅಧ್ಯಯನದ ಪ್ರಕಾರ ಸಿಂಗಲ್ ಡೋಸ್ ಕೊರೊನಾ ಲಸಿಕೆ ಕೂಡ ಸಾವಿನ ಸಂಖ್ಯೆಯನ್ನ ಕಡಿಮೆ ಮಾಡಬಲ್ಲದು ಎಂಬ ಅಂಶ ಬಹಿರಂಗವಾಗಿದೆ. ಕೊರೊನಾ ಸಿಂಗಲ್ ಡೋಸ್ ಪಡೆದರೆ 82 ಪ್ರತಿಶತ ಹಾಗೂ ಡಬಲ್ ಡೋಸ್ 95 ಪ್ರತಿಶತ ಸಾವಿನ ಪ್ರಮಾಣವನ್ನ ತಡೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಸಾವಿನ ಪ್ರಮಾಣ ತಡೆಗಟ್ಟುವಲ್ಲಿ ಕೋವಿಡ್ 19 ಲಸಿಕೆ ಪಾತ್ರ ಎಂಬ ಅಧ್ಯಯನದ ವರದಿಯನ್ನ ಇಂಡಿಯನ್ ಜರ್ನಲ್ ಆಫ್ ರಿಸರ್ಚ್ನಲ್ಲಿ ಜೂನ್ 21ರಂದು ಪ್ರಕಟ ಮಾಡಲಾಗಿದೆ. ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಕೊರೊನಾ ಲಸಿಕೆ ಯಾವ ರೀತಿ ಕೆಲಸ ಮಾಡ್ತಿದೆ ಅನ್ನೋದನ್ನ ದಾಖಲು ಮಾಡಿಕೊಳ್ತಿದೆ. ಕೊರೊನಾ 2ನೆ ಅಲೆಯಲ್ಲಿ ಉಂಟಾದ ಸಾವು, ರೋಗಿ ಆಸ್ಪತ್ರೆಗೆ ದಾಖಲಾದ ದಿನಾಂಕ ಹಾಗೂ ಲಸಿಕೆ ದಿನಾಂಕವನ್ನ ಆಧರಿಸಿ ಈ ವರದಿಯನ್ನ ತಯಾರಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಕೊರೊನಾ ಲಸಿಕೆ ಪಡೆಯದ ಹಾಗೂ ಪಡೆದವರಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅನ್ನೋದನ್ನ ಆಧರಿಸಿ ಈ ವರದಿ ತಯಾರಿಸಲಾಗಿದೆ ಎಂದು ಐಸಿಎಂಆರ್ – ಎನ್ಐಇ ನಿರ್ದೇಶಕ ಡಾ. ಮನೋಜ್ ಮುರ್ಹೇಕರ್ ಹೇಳಿದ್ರು.
ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಒಟ್ಟು 1,17,524 ಮಂದಿ ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 1ರಿಂದ ಮೇ 4ರ ಒಳಗಾಗಿ 14, 32,792 ಮಂದಿ ಪೊಲೀಸರು ಕೊರೊನಾ ಮೊದಲ ಡೋಸ್ ಪಡೆದಿದ್ದಾರೆ ಹಾಗೂ 67,673 ಮಂದಿ ಕೊರೊನಾ ಎರಡನೆ ಡೋಸ್ ಪಡೆದಿದ್ದರು. ಇನ್ನುಳಿದ 17,059 ಮಂದಿ ಕೋವಿಡ್ ಲಸಿಕೆ ಪಡೆದಿರಲಿಲ್ಲ.
ಏಪ್ರಿಲ್ 13ರಿಂದ ಮೇ 14ರ ಒಳಗಾಗಿ ತಮಿಳುನಾಡಿನಲ್ಲಿ 31 ಮಂದಿ ಪೊಲೀಸರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ 31 ಮಂದಿಯಲ್ಲಿ ನಾಲ್ವರು 2 ಡೋಸ್ ಲಸಿಕೆ ಪಡೆದಿದ್ದರು. 7 ಮಂದಿ 1 ಡೋಸ್ ಲಸಿಕೆ ಸ್ವೀಕರಿಸಿದ್ದರು ಹಾಗೂ ಉಳಿದ 20 ಮಂದಿ ಕೊರೊನಾ ಲಸಿಕೆಯನ್ನೇ ಪಡೆದಿರಲಿಲ್ಲ. ಈ ಲೆಕ್ಕಾಚಾರವನ್ನ ಆಧರಿಸಿ ಕೊರೊನಾ ಸಾವನ್ನ ತಡೆಗಟ್ಟುವಲ್ಲಿ ಲಸಿಕೆಯ ಪರಿಣಾಮಕರತ್ವವನ್ನ ಅಳೆಯಲಾಗಿದೆ.