ಮದುವೆ ಮನೆ ಅಂದರೆ ಸಾಕು, ಅಲ್ಲಿ ಒಂದು ಕಡೆ ಪುರೋಹಿತರು ಮಂತ್ರಗಳನ್ನ ಗಟ್ಟಿಯಾಗಿ ಹೇಳ್ತಿರುತ್ತಾರೆ. ಇನ್ನೊಂದು ಕಡೆ ವಾಲಗದ ಸದ್ದು ಪ್ರತಿಧ್ವನಿಸುತ್ತಿರುತ್ತೆ. ಅದರ ಮಧ್ಯ ಅಲ್ಲಿ ಸೇರಿದ್ದ ಅತಿಥಿಗಳ ಮಾತು-ನಗು ಅಲ್ಲಿನ ವಾತಾವರಣ ಇನ್ನಷ್ಟು ಕಳೆಗಟ್ಟುವ ಹಾಗೆ ಮಾಡಿರುತ್ತೆ. ಆದರೆ ಆ ಮದುವೆ ಮನೆಯಲ್ಲಿ ಕೇಳಿಸಿದ್ದು ಮಾತ್ರ ಕಪಾಳ ಮೋಕ್ಷದ ಸದ್ದು.
ಆ ಮದುವೆ ಮನೆಯಲ್ಲಿ ಖುಷಿಯಿಂದ ಒಬ್ಬರ ಕೈ ಇನ್ನೊಬ್ಬರು ಹಿಡಿಯುವ ಬದಲು, ಒಬ್ಬರಿಗೊಬ್ಬರು ಸರಿಯಾಗಿ ಬಾರಿಸಿದ್ದಾರೆ. ಮೊದಲಿಗೆ ವರ ಕೈಯಲ್ಲಿ ಸಿಹಿಯನ್ನ ಹಿಡಿದುಕೊಂಡು ವಧುವಿಗೆ ತಿನ್ನಿಸಲು ಮುಂದಾಗುತ್ತಾನೆ. ಆದರೆ ವಧು ಮಾತ್ರ ಅದನ್ನ ತಿನ್ನುವುದಕ್ಕೆ ಸುತರಾಂ ಒಪ್ಪಲಿಲ್ಲ. ಬದಲಾಗಿ ಆತನ ಕೆನ್ನೆಗೆ ಸರಿಯಾಗಿ ಬಾರಿಸುತ್ತಾಳೆ. ಇದರಿಂದ ಕೋಪಗೊಂಡ ಆತನು ಸಹ ಆಕೆಗೆ ಬಾರಿಸುತ್ತಾನೆ.
ಆಕೆ ತಾನೂ ಕೂಡ ಕಡಿಮೆ ಇಲ್ಲ ಎಂದು ಕೈ ಎತ್ತಿ ಬಾರಿಸಿದ್ದೇ ಬಾರಿಸಿದ್ದು. ಆತನು ತನ್ನ ಮದುವೆ ಅನ್ನೋದನ್ನೇ ಮರೆತು ಹಿಗ್ಗಾಮುಗ್ಗ ಹೊಡೆಯಲು ಆರಂಭಿಸಿದ್ದ. ಅಲ್ಲಿದ್ದ ಅತಿಥಿಗಳು ಮುಂದೆ ಬಂದು ಅವರಿಬ್ಬರ ಕಿತ್ತಾಟವನ್ನ ತಡೆಯಲು ಪ್ರಯತ್ನಿಸಿದರು. ಅಷ್ಟಕ್ಕೆ ಬಿಡದೇ ಅವರಿಬ್ಬರು ಕೂದಲನ್ನ ಹಿಡಿದು ಎಳೆದಾಡಿಕೊಂಡು, ಒಬ್ಬರನ್ನೊಬ್ಬರು ನೆಲಕ್ಕೆ ಬೀಳಿಸಿ ಉರುಳಾಡಿಸಿ ಹೊಡೆದಾಡಿದ್ದರು. ಇದೇ ಮದುವೆಯ ಕಿತ್ತಾಟದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಟ್ವಿಟ್ಟರ್ನಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಹೊಂದಿದೆ. ಕೆಲವರಿಗೆ ಈ ಗಲಾಟೆ ನಿಜವಾಗಿ ನಡೆದಿದ್ದೋ ಅಥವಾ ವಿಡಿಯೋಗೋಸ್ಕರ ಹೀಗೆ ಮಾಡಲಾಗಿದೆಯೋ ಅನ್ನೊ ಗೊಂದಲ ಉಂಟಾಗಿದೆ. ಕೆಲ ನೆಟ್ಟಿಗರು ಇವರಿಗೇಕೆ ಮದುವೆ, ಜೀವನಪರ್ಯಂತ ಒಬ್ಬಂಟಿಯಾಗಿ ಇದ್ದರೆನೇ ಒಳ್ಳೆಯದು’ ಎಂದು ಹೇಳಿದ್ದಾರೆ. ಇನ್ನೊಬ್ಬರು ಮದುವೆ ನಂತರ ಆಗಬೇಕಾಗಿದ್ದ ಹೊಡೆದಾಟ, ಮದುವೆ ದಿನವೇ ಇಲ್ಲಿ ನಡೆಯುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ.