ಗಣೇಶ ಚತುರ್ಥಿಯಂದು ನಾಡಿನಾದ್ಯಂತ ಪೂಜೆಗೊಳ್ಳುವ ಗಣೇಶನಿಗೆ ನೈವೇದ್ಯವೇ ಅತಿ ಮುಖ್ಯವಾದದ್ದು. ಗಣಪನನ್ನು ಪುರಾಣಗಳು ಸಿಹಿ ತಿನಿಸುಗಳ ಪ್ರಿಯ ಎಂದೇ ಬಿಂಬಿಸಿವೆ. ಅದರಲ್ಲೂ ಕರಿಗಡುಬು ಗಜಮುಖನ ನೈವೈದ್ಯ ಪಟ್ಟಿಯಲ್ಲಿ ಇರಲೇಬೇಕು. ಕರಿಗಡುಬು ಸಿದ್ದಪಡಿಸೋದು ಕೂಡಾ ಸುಲಭವೇ.
ಬೇಕಾಗುವ ವಸ್ತುಗಳು :
ಒಂದು ಕಪ್ಪು ಕಡಲೆ ಬೇಳೆ, ಎರಡು ಕಪ್ ಬೆಲ್ಲ(ಸಕ್ಕರೆ), ಒಂದು ಕಪ್ ಗೋಧಿ ಹಿಟ್ಟು, 2 ಚಮಚ ತುಪ್ಪ, ಚಿಟಿಕೆ ಉಪ್ಪು, ಏಲಕ್ಕಿ, ಕರಿಯಲು ಎಣ್ಣೆ.
ಮಾಡುವ ವಿಧಾನ :
ಕಡಲೆಬೇಳೆಯನ್ನು ಮೆತ್ತಗೆ ಬೇಯಿಸಿ, ನೀರು ಬಸಿದು ಬೆಲ್ಲ ಹಾಕಿ ಒಲೆಯ ಮೇಲಿಟ್ಟು ಕಾಯಿಸಿಕೊಳ್ಳಿ. ಇದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ. ಸೀದು ಹೋಗದಂತೆ ಕಲಕಿ, ಹೂರಣ ತಳ ಬಿಟ್ಟ ನಂತರ ಇಳಿಸಿ.
ತಣಿದ ನಂತರ ಕೈಯಲ್ಲಿ ಸ್ವಲ್ಪ ಹಿಸುಕಿ ಚಿಕ್ಕ-ಚಿಕ್ಕ ಉಂಡೆ ಮಾಡಿ. ಗೋಧಿ ಹಿಟ್ಟಿಗೆ ಉಪ್ಪು, ಸಕ್ಕರೆ, ತುಪ್ಪ, ನೀರು ಹಾಕಿ ಹಿಟ್ಟನ್ನು ಕಲಸಿ. ಪೂರಿಯಂತೆ ಲಟ್ಟಿಸಿ, ಬಳಿಕ ಕಡಲೆಹೂರಣ ಉಂಡೆಯನ್ನು ಒಳಗಿಟ್ಟು ಎರಡು ಬದಿಯನ್ನು ಮಡಚಿ ಕರಜಿಕಾಯಿಯಂತೆ ಮಾಡಿ ಕಾದ ಎಣ್ಣೆ ಹೊಂಬಣ್ಣ ಬರುವರೆಗೆ ಕರಿಯಿರಿ.