ಬೆಂಗಳೂರು : ಜುಲೈ 10 ರಂದು ಸೋಮವಾರ ಅನ್ನಭಾಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಜುಲೈ 10 ರಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. 15 ದಿನದಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಚಿಂತನೆ ನಡೆಸಲಾಗಿದೆ. ಜೂನ್ ನಲ್ಲಿ 1,28,23,868 ಕುಟುಂಬಗಳ ಪೈಕಿ 1,17,29,296 ಕುಟುಂಗಳು ಅಕ್ಕಿ ಪಡೆದಿವೆ. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬ ಅಂದರೆ ಅಂದಾಜು 20 ಲಕ್ಷ ಜನ ಅಕ್ಕಿ ಪಡೆದುಕೊಂಡಿಲ್ಲ.
20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಕೆಲವರು ಬಿಪಿಎಲ್ ಕಾರ್ಡ್ ಹೊಂದುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ. ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ, ಹೆಚ್ಚುವರಿ 5 ಕೆಜಿ ಅಕ್ಕಿಗೆ ಹಣ ನೀಡುವುದು ಅನಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ 3 ತಿಂಗಳಿಂದ 5,37,213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ. ಹೀಗಾಗಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.