ನೀವು ಎಂದಾದರು ಡ್ಯಾನ್ಸಿಂಗ್ ಟ್ರೀ ನೋಡಿದ್ದೀರಾ ? ಇಲ್ಲೊಂದು ದ್ವೀಪದಲ್ಲಿ ಡ್ಯಾನ್ಸಿಂಗ್ ಟ್ರೀ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ.
ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ ಮರಗಳನ್ನು ವಿವಿಧ ನೃತ್ಯ ಭಂಗಿಗಳಲ್ಲಿ ಕಾಣಬಹುದು. ಉಪ್ಪು ನೀರು ಮತ್ತು ಮರಳಿನಲ್ಲಿ ನಿಂತಿರುವ ನಿತ್ಯಹರಿದ್ವರ್ಣ ಮರಗಳು ಶಾಸ್ತ್ರೀಯ ನೃತ್ಯದ ಭಂಗಿಯನ್ನು ತೋರುವಂತೆ ಬೆಳೆದಿವೆ.
ಈ ಸುಂದರವಾದ ದ್ವೀಪವು ನೈಸರ್ಗಿಕ ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತದೆ, ಆದರೆ ಈ ಸ್ಥಳವನ್ನು ಇನ್ನಷ್ಟು ವಿಶೇಷವಾಗಿಸುವುದು ಈ ವಿಶಿಷ್ಟವಾದ ನಿತ್ಯಹರಿದ್ವರ್ಣ ಮರಗಳು, ಇದನ್ನು ಡ್ಯಾನ್ಸಿಂಗ್ ಟ್ರೀ ಎಂದೂ ಕರೆಯುತ್ತಾರೆ.
ಸೂರ್ಯೋದಯ ಮತ್ತು ಸೂರ್ಯಾಸ್ತ ಸಂದರ್ಭದಲ್ಲಿ ಈ ಮರಗಳಿಂದಾಗಿ ಸಮುದ್ರ ತೀರವು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಫೋಟೋ ತೆಗೆಯಲು ಇದು ಅತ್ಯಂತ ಪ್ರಶಸ್ತ ಮತ್ತು ಅತೀ ಪ್ರಿಯವಾದ ಸ್ಥಳವಾಗಿದೆ.
ಈ ಮರಗಳ ಆಕಾರ ಸಾಮಾನ್ಯ ಮರಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಸಾಮಾನ್ಯ ಮರಗಳ ಕೊಂಬೆ ಬೇರುಗಳಿಗಿಂತ ದೊಡ್ಡದಾಗಿ, ದಟ್ಟವಾಗಿರುತ್ತವೆ, ಆದರೆ ಈ ಮರಗಳ ಬೇರುಗಳು ನೇರ ಮತ್ತು ದೊಡ್ಡದಾಗಿವೆ. ಕೊಂಬೆಗಳು ತೆಳುವಾಗಿದೆ. ಸಮುದ್ರದ ಅಲೆಗಳ ಹೊಡೆತದಿಂದ ಮರಗಳ ಬೇರುಗಳು ಹೊರಬರುತ್ತವೆ, ಹೀಗಾಗಿ ಅವು ತುಂಬಾ ಸುಂದರವಾಗಿ ಕಾಣುತ್ತವೆ.