ಶ್ರೀನಗರ: 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಆಘಾತಕಾರಿ ಘಟನೆ ಕಾಶ್ಮೀರದ ಬುಡ್ಗಾಮ್ ನಲ್ಲಿ ಸಂಭವಿಸಿದೆ. ಬಾಲಕ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿದ್ದು, ದುರ್ಘಟನೆಯಲ್ಲಿ ಅಪ್ರಾಪ್ತ ಹುಡುಗ ಮೃತಪಟ್ಟಿದ್ದಾನೆ.
ರೇಂಜ್ ಆಫೀಸರ್ (ವನ್ಯಜೀವಿ) ಸಾಜಿದ್ ಫಾರೂಕ್, ದುರದೃಷ್ಟಕರ ಘಟನೆ ಎಂದು ಮರುಗಿದ್ದಾರೆ. ವರದಿ ಪ್ರಕಾರ, ಬಾಲಕ ಬುಡ್ಗಾಂನ ಸೋಯ್‌ಬಗ್‌ನ ಹರಿ ಪೊರಾ ಹರನ್‌ನಲ್ಲಿದ್ದಾಗ ಚಿರತೆ ಆತನ ಮೇಲೆ ದಾಳಿ ಮಾಡಿದೆ. ಬಾಲಕನ ಕಿರುಚಾಟ ಕೇಳಿ ಗ್ರಾಮಸ್ಥರಲ್ಲಿ ಕೆಲವರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಅವರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಬುಡ್‌ಗಾಮ್‌ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. 4 ವರ್ಷದ ಬಾಲಕಿಯೊಬ್ಬಳು ಓಂಪುರ ಹೌಸಿಂಗ್ ಕಾಲೋನಿಯಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಮರುದಿನ ಬಾಲಕಿಯ ಶವ ಅರಣ್ಯ ನರ್ಸರಿಯಲ್ಲಿ ಪತ್ತೆಯಾಗಿತ್ತು.