
ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಎಎಸ್ಐ ಒಬ್ಬರಿಗೆ ವೇಗವಾಗಿ ಬಂದ ಆಟೋ ಡಿಕ್ಕಿಯಾಗಿದ್ದು, ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 50 ವರ್ಷದ ನಾಗರಾಜು ಮೃತಪಟ್ಟವರಾಗಿದ್ದು, ಭಾನುವಾರದಂದು ಜರ್ಮನ್ ಚಾನ್ಸಲರ್ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಇವರನ್ನು ಬಸವೇಶ್ವರ ಸರ್ಕಲ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಧ್ಯಾಹ್ನ 3-45ರ ಸುಮಾರಿಗೆ ವೇಗವಾಗಿ ಬಂದ ಆಟೋ (KA 02-AE 3869) ಇವರಿಗೆ ಡಿಕ್ಕಿ ಹೊಡೆದಿದ್ದು ಚಾಲಕ ಆಟೋದೊಂದಿಗೆ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು.
ಆದರೂ ವೈದ್ಯರು ನಿರಂತರವಾಗಿ ಪ್ರಯತ್ನ ನಡೆಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ನಾಗರಾಜು ಮೃತಪಟ್ಟಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೋ ಚಾಲಕ ಶಿವಕುಮಾರ್ ನನ್ನು ಬಂಧಿಸಿದ್ದಾರೆ.