ಗಾಜಿಯಾಬಾದ್ (ಉತ್ತರ ಪ್ರದೇಶ): ಸುಮಾರು 40 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ನಿರ್ಭಯಾ ಅತ್ಯಾಚಾರ ಮಾದರಿಯ ಈ ಕೃತ್ಯ ಜನತೆಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆ ದೆಹಲಿ ಮೂಲದ ನಿವಾಸಿಯಾಗಿದ್ದು, ಹುಟ್ಟುಹಬ್ಬದ ಪಾರ್ಟಿಗೆಂದು ಸಹೋದರನ ಮನೆಗೆ ಬಂದಿದ್ದರು. ಪಾರ್ಟಿ ಮುಗಿದ ಬಳಿಕ ಮಹಿಳೆಯನ್ನು ಆಕೆಯ ಸಹೋದರ ಬಸ್ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದಾನೆ. ಈ ವೇಳೆ ಕಾರಿನಲ್ಲಿ ಬಂದಿರುವ ಕಾಮುಕರು ಆಕೆಯನ್ನು ಅಪಹರಣ ಮಾಡಿ ಈ ಕೃತ್ಯ ಎಸಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಈ ಐವರೂ ದುರುಳರು ಸಂತ್ರಸ್ತ ಮಹಿಳೆಗೆ ಪರಿಚಿತರಾಗಿದ್ದು, ಅವರಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಅಪಹರಣವಾದ ಎರಡು ದಿನಗಳ ಬಳಿಕ ಮಹಿಳೆ ನಂದಗ್ರಾಮ ಪೊಲೀಸ್ ಠಾಣೆ ಬಳಿ ಪತ್ತೆಯಾಗಿದ್ದು, ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಘಾಜಿಯಾಬಾದ್ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.