ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಭಾರತ-ಆಸ್ಟ್ರೇಲಿಯಾ ನಡುವಣ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ನಂತರ ಅಡುಗೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ವಿಶೇಷ ಅಂದ್ರೆ ರಾತ್ರಿಯ ಅಡುಗೆಗೆ ಮಾಡಲು ಆಯ್ಕೆ ಮಾಡಿಕೊಂಡ ರೆಸಿಪಿಗಳೆಲ್ಲವೂ ಪ್ರಧಾನಿ ನರೇಂದ್ರ ಮೋದಿಯವರ ತವರು ಗುಜರಾತ್ ನಿಂದ ಬಂದವು. ಈ ಮೂಲಕ ಕ್ಯಾನ್‌ಬೆರಾ ಮತ್ತು ನವದೆಹಲಿ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಇರುವ ಪ್ರಾಮುಖ್ಯತೆಯನ್ನು ಮಾರಿಸನ್ ಒತ್ತಿ ಹೇಳಿದ್ದಾರೆ.
“ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು, ನಾನು ಆಯ್ಕೆ ಮಾಡಿಕೊಂಡಿರುವ ಮೇಲೋಗರಗಳೆಲ್ಲ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರಾಂತ್ಯದಿಂದ ಬಂದಿದ್ದು, ಅವರ ನೆಚ್ಚಿನ ಖಿಚಡಿ ಕೂಡ ಮಾಡಿದ್ದೇನೆ ” ಅಂತಾ ಮಾರಿಸನ್ ತಾವು ಏಪ್ರನ್ ತೊಟ್ಟು ಅಡುಗೆ ಮಾಡ್ತಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಊಟದ ಮೆನು ಮಾರಿಸನ್ ಅವರ ಪತ್ನಿ ಜೆನ್, ಮಕ್ಕಳು ಹಾಗೂ ತಾಯಿಗೂ ಇಷ್ಟವಾಗಿದೆಯಂತೆ. ಕೆಲದಿನಗಳ ಹಿಂದಷ್ಟೆ ಮಾರಿಸನ್ ಸಮೋಸಾ ಹಾಗೂ ಮಾವಿನ ಚಟ್ನಿ ಮಾಡಿ ಸವಿದಿದ್ದರು. ಅದನ್ನು ಪ್ರಧಾನಿ ಮೋದಿ ಅವರ ಜೊತೆ ಶೇರ್ ಮಾಡಿಕೊಳ್ಳುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಭಾರತ-ಆಸ್ಟ್ರೇಲಿಯಾ ನಡುವೆ 5 ವರ್ಷಗಳ ಅವಧಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ವೆಚ್ಚ ಸುಮಾರು 45-50 ಬಿಲಿಯನ್ ಡಾಲರ್.
ಈ ಒಪ್ಪಂದದ ಪ್ರಕಾರ ಜವಳಿ, ಚರ್ಮ, ಆಭರಣ ಮತ್ತು ಕ್ರೀಡಾ ಉತ್ಪನ್ನಗಳಂತಹ 95 ಪ್ರತಿಶತದಷ್ಟು ಭಾರತೀಯ ಸರಕುಗಳಿಗೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಸುಂಕ ಮುಕ್ತ ಪ್ರವೇಶವನ್ನು ಒದಗಿಸಲಾಗುತ್ತದೆ. ಇದು ಭಾರತದೊಂದಿಗೆ ಆಸ್ಟ್ರೇಲಿಯಾ ಮಾಡಿಕೊಂಡಿರೋ ಅತಿ ದೊಡ್ಡ ಹೂಡಿಕೆ ಅಂತಾ ಅಲ್ಲಿನ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಇದು ಮೈಲುಗಲ್ಲಾಗಲಿದೆ ಎಂದಿದ್ದಾರೆ.