ಬಡ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸರ್ಕಾರಗಳು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಪಡಿತರವನ್ನು ವಿತರಿಸುತ್ತವೆ. ಇದಕ್ಕಾಗಿ ಹಲವು ಮಾನದಂಡಗಳನ್ನು ವಿಧಿಸಲಾಗಿದ್ದರೂ ಸಹ ಉಳ್ಳವರೂ ಬಿಪಿಎಲ್ ಕಾರ್ಡ್ ಪಡೆದು ಉಚಿತ ಪಡಿತರ ಪಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಅಂಥದ್ದೇ ಪ್ರಕರಣ ಒಂದರ ವಿವರ ಇಲ್ಲಿದೆ.
ಪಂಜಾಬ್ ನ ಹೋಷಿಯಾರ್ಪುರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಉಚಿತ ಪಡಿತರ ಪಡೆಯಲು ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದಿದ್ದಾನೆ. ಈತ ತನ್ನ ಕಾರಿನ ಡಿಕ್ಕಿಗೆ ಸರ್ಕಾರದ ವತಿಯಿಂದ ನೀಡಲಾಗುವ ಉಚಿತ ಗೋಧಿಯನ್ನು ತುಂಬಿಸಿಕೊಳ್ಳುತ್ತಿದ್ದ ವೇಳೆ ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಈ ವಿಡಿಯೋ ಕೆಲ ಹೊತ್ತಿನಲ್ಲೇ ವೈರಲ್ ಆಗಿದ್ದು, ಮರ್ಸಿಡಿಸ್ ಬೆಂಜ್ ನಲ್ಲಿ ಬಂದವನನ್ನು ರಮೇಶ್ ಸೈನಿ ಎಂದು ಗುರುತಿಸಲಾಗಿದೆ. ಇದೀಗ ಆತ ಇದಕ್ಕೆ ಸ್ಪಷ್ಟನೆ ನೀಡಿದ್ದು, ಈ ಕಾರು ನನ್ನದಲ್ಲ. ವಿದೇಶದಲ್ಲಿರುವ ನನ್ನ ಸಂಬಂಧಿಯದ್ದು. ಆತ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ಆಗಾಗ ನಾವು ಇದನ್ನು ಬಳಸುತ್ತೇವೆ, ವಾಸ್ತವದಲ್ಲಿ ನಾನು ಅತ್ಯಂತ ಬಡವ ಎಂದು ಹೇಳಿಕೊಂಡಿದ್ದಾರೆ.