
ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಪ್ ಶಾಸಕ ಅಮೋಲಾಕ್ ಸಿಂಗ್ ಟ್ರಾಫಿಕ್ ಪೋಲೀಸ್ ಜೊತೆ ಜಗಳವಾಡುತ್ತಿರುವುದು ಕಂಡು ಬಂದಿದೆ.
ಪಂಜಾಬ್‌ನ ಜೈತು ಕ್ಷೇತ್ರದ ಶಾಸಕ ಸಿಂಗ್ ಹಾಗೂ ಪೊಲೀಸರ ನಡುವಿನ ವಾಗ್ವಾದದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಟ್ರಾಫಿಕ್ ಪೊಲೀಸ್ ಅಧಿಕಾರಿ ಜೊತೆ ಸಿಂಗ್ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.
ಆದ್ರೆ ಈ ಆರೋಪವನ್ನು ನಿರಾಕರಿಸಿರುವ ಶಾಸಕ ಅಮೋಲಾಕ್ ಸಿಂಗ್ ಟ್ರಾಫಿಕ್ ಪೊಲೀಸ್ ಅಧಿಕಾರಿಯ ವಿರುದ್ಧವೇ ಅನುಚಿತ ವರ್ತನೆಯ ಆರೋಪ ಹೊರಿಸಿದ್ದಾರೆ. ವೀಡಿಯೊದಲ್ಲಿ ಶಾಸಕ ಅಮೋಲಾಕ್ ಸಿಂಗ್ ಟ್ರಾಫಿಕ್ ಪೋಲೀಸ್‌ನ್ನು ಅವಾಚ್ಯವಾಗಿ ನಿಂದನೆ ಮಾಡುತ್ತಿರುವುದು ಕಂಡು ಬಂದಿದೆ. ಇದರ ಜೊತೆ ಈ ಘಟನೆಯನ್ನು ಚಿತ್ರೀಕರಣ ಮಾಡಿದಕ್ಕಾಗಿ ಪೊಲೀಸ್ ಅಧಿಕಾರಿಯ ಫೋನ್ ಅನ್ನು ಒಡೆದು ಹಾಕಿದ್ದಾರೆ ಎಂದು ಹೇಳಲಾಗಿದೆ.
ಶಾಸಕ ಅಮೋಲಾಕ್ ಸಿಂಗ್ ಮತ್ತು ಮತ್ತು ಚಂಡೀಗಢ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲಾಖಾ ಸಿಂಗ್ ನಡುವಿನ ಈ ವಾಗ್ವಾದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಮತ್ತು ಅಕಾಲಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಆಪ್ ಶಾಸಕ ಅಮೋಲಕ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಗ್ ಬಜ್ವಾ “ಚಂಡೀಗಢ ಪೊಲೀಸ್ ಸಿಬ್ಬಂದಿಯೊಂದಿಗೆ ಶಾಸಕ ಅಮೋಲಕ್ ಸಿಂಗ್ ನಡೆಸಿರುವ ಮಾತಿನ ಚಕಮಕಿ ವಿರುದ್ದ ಕ್ರಮ ಕೈಗೊಳ್ಳಬೇಕು. ಚಂಡೀಗಢ ಪೊಲೀಸ್‌ನ ಡಿಜಿಪಿ ಮತ್ತು ಚಂಡೀಗಢದ ಎಸ್‌ಎಸ್‌ಪಿ, ಶಾಸಕ ಅಮೋಲಕ್ ಸಿಂಗ್‌ರನ್ನು ಬಂಧಿಸುವ ಮೂಲಕ ಶಾಂತಿಪ್ರಿಯ ನಾಗರಿಕರಿಗೆ ಸರಿಯಾದ ಸಂದೇಶವನ್ನು ಪಾಸ್ ಮಾಡಬೇಕು. ನ್ಯಾಯ ಜಯಿಸಲಿ” ಎಂದು ಹೇಳಿದ್ದಾರೆ.