ಪೂರ್ವ ಕರಾವಳಿಯ ಸಿಸಿಲಿ ಕಡಲತೀರದಲ್ಲಿ ಎರಡು ಟನ್‌ಗಳಷ್ಟು ಕೊಕೇನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೋಗಳನ್ನು ಪೊಲೀಸರು ಆನ್ಲೈನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆರ್ಥ ಹಾಗೂ ಹಣಕಾಸು ಸಚಿವಾಲಯದಡಿ ಬರುವ ’ಗಾರ್ಡಿಯಾ ಡ ಫಿಯಾಂಜ಼ಾ’ ತನ್ನ ಕಾರ್ಯಾಚರಣೆಯ ವಿಡಿಯೋ ಶೇರ್ ಮಾಡಿಕೊಂಡಿದೆ. ಈ ವೇಳೆ ಸುಮಾರು 400 ದಶಲಕ್ಷ ಯೂರೋ (3,000 ಕೋಟಿ ರೂ.ಗಳು) ಮೌಲ್ಯದ ಮಾಲನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನೀರಿನಲ್ಲಿ ಮುಳುಗದೇ ಇರಲಿ ಎಂಬ ಕಾರಣಕ್ಕೆ ಈ ಕೊಕೇನ್ ಮಾಲನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ಇಡಲಾಗಿತ್ತು. ಭಾರೀ ಸರಕು ಸಾಗಾಟದ ಹಡಗೊಂದು ಈ ಕೊಕೇನ್ ಅನ್ನು ಬೇಕಂತಲೇ ಕಡಲ ತೀರದಲ್ಲಿ ಬಿಟ್ಟು ಹೋಗಿದ್ದು, ಬಳಿಕ ಮತ್ತೊಂದು ನೌಕೆಯ ನೆರವಿನಿಂದ ತೀರಕ್ಕೆ ತರಲು ಉದ್ದೇಶವಿರಬಹುದೆಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೇ ಸ್ಥಳದಲ್ಲಿ ಕೊಕೇನ್‌ನ ಇನ್ನಷ್ಟು ಸರಕೇನಾದರೂ ಸಿಗಬಹುದೇ ಎಂದು ಶೋಧಿಸಲು ಪೊಲೀಸ್ ವಿಮಾನಗಳು ನಿರಂತರ ಹಾರಾಟ ನಡೆಸುತ್ತಿವೆ. 70 ಬಂಡಲ್‌ಗಳಲ್ಲಿ ಒಟ್ಟಾರೆ 1,600 ಪ್ಯಾಕೆಟ್‌ಗಳಲ್ಲಿ ಕೊಕೇನ್ ತುಂಬಿಸಿ ಇಡಲಾಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿದು ಬಂದಿದೆ.