
ಕೊಟ್ಟ ಮಾತಿನಂತೆ ಕಳ್ಳತನವಾಗಿದ್ದ ನಾಯಿಯನ್ನ ದೆಹಲಿ ಪೊಲೀಸರು 24 ಗಂಟೆಯೊಳಗೆ ಪತ್ತೆ ಮಾಡಿ ಮಹಿಳೆಗೆ ನೀಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡ ಪೊಲೀಸರ ಕಾರ್ಯ ಮತ್ತು ನಾಯಿ ಮತ್ತು ಅದರ ಮಾಲೀಕರ ಪುನರ್ಮಿಲನದ ವಿಡಿಯೋ ವೈರಲ್ ಆಗಿದ್ದು ಹೃದಯ ಗೆದ್ದಿದೆ.
ದಕ್ಷಿಣ ದೆಹಲಿಯ ಚಿತ್ತರಂಜನ್ ಪಾರ್ಕ್ ನಲ್ಲಿ ಫೆಬ್ರವರಿ 17 ರಂದು ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ನಾಯಿಯ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ನಂತರ ಅವನು ತನ್ನ ಚೀಲದೊಳಗೆ ನಾಯಿಯನ್ನ ಹಾಕಿಕೊಂಡು ಹೋಗುತ್ತಾನೆ. ನಾಯಿ ಕಾಣೆಯಾದ ಬಗ್ಗೆ ಮಹಿಳೆ ದೂರು ನೀಡಿದಾಗ, 24 ಗಂಟೆಗಳಲ್ಲಿ ನಾಯಿಯನ್ನು ಪತ್ತೆ ಮಾಡುವುದಾಗಿ ಪೊಲೀಸರು ಭರವಸೆ ನೀಡಿದರು.
ಸುಮಾರು 150 ಸಿಸಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ ನಂತರ, ಪೊಲೀಸರು ಕಳ್ಳನ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದರು. ದೆಹಲಿ ಪೊಲೀಸರಿಗೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ.