ಕಸ ವಿಂಗಡಣೆ ವಿಚಾರದಲ್ಲಿ ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ಪೌರ ಕಾರ್ಮಿಕರನ್ನು ಬೆದರಿಸಿದ್ದಾನೆ.
ಪೆಟ್ರೋಲ್ ಪಂಪ್ ಮಾಲೀಕ ಮತ್ತು ಮಧ್ಯಪ್ರದೇಶದ ಮಾಜಿ ಬಿಜೆಪಿ ಶಾಸಕ ಮನೋಜ್ ಪಟೇಲ್ ಸಂಬಂಧಿ ಮಹೇಶ್ ಪಟೇಲ್ ವಿರುದ್ಧ ಸ್ಥಳೀಯ ನಾಗರಿಕ ಸಂಸ್ಥೆಯ ಪೌರ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ
ವೈರಲ್ ಆಗಿರುವ ವೀಡಿಯೊದಲ್ಲಿ ಪೌರ ಕಾರ್ಮಿಕರು ಮಹೇಶ್ ಪಟೇಲ್ ಅವರ ಮನೆಯ ಕಸ ಸಂಗ್ರಹಿಸಿದ್ದಾರೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸದ ಕಾರಣ ಮಹೇಶ್ ಪಟೇಲ್ ಅವರ ಪತ್ನಿ ಮತ್ತು ಪೌರ ಕಾರ್ಮಿಕರ ನಡುವೆ ವಾಗ್ವಾದ ನಡೆಯಿತು.
ವಾದ ಜೋರಾಗ್ತಿದ್ದಂತೆ ಮಹೇಶ್ ಪಟೇರ್ ಅವರ ಮಗ ಸಹ ಗಲಾಟೆ ಮಾಡಿದ್ದಾರೆ. ಒಂದು ಹಂತದಲ್ಲಿ ಉದ್ಯಮಿ ಮನೆಯೊಳಗಿನಿಂದ ಗನ್ ತಂದು ಗಾಳಿಯಲ್ಲಿ ಗುಂಡು ಹಾರಿಸಿ ಪೌರ ಕಾರ್ಮಿಕರತ್ತ ಗನ್ ತೋರಿಸುತ್ತಾ ಬೆದರಿಕೆ ಹಾಕಿದ್ದಾರೆ.
ನಂತರ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರ ನಡುವೆ ಮಾತುಕತೆ ನಡೆಸಿ ಕಳಿಸಿದ್ದಾರೆ. ನಂತರ ಕಸದ ವ್ಯಾನ್‌ಗಳನ್ನು ನಿರ್ವಹಿಸುವ ಚಾಲಕರ ಸಂಘದ ಸದಸ್ಯರು ಬೆದರಿಕೆಗೆ ಒಳಗಾದ ನೈರ್ಮಲ್ಯ ಕಾರ್ಮಿಕರೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಲಿಖಿತ ದೂರು ಸಲ್ಲಿಸಿದರು.
ಉದ್ಯಮಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಪಟೇಲ್ ಅವರ ಸಂಬಂಧಿ ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಮಿಶ್ರಾ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.