ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ರಸ್ತೆಯ ಮಧ್ಯದಲ್ಲಿ ಕುಡುಕರ ಗುಂಪು ರೈಫಲ್‌ಗಳನ್ನು ಝಳಪಿಸುತ್ತಾ, ನೃತ್ಯ ಮಾಡುತ್ತಾ ಮತ್ತು ಜೋರಾಗಿ ಸಂಗೀತವನ್ನು ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಕಾರು ಮತ್ತು ಅದರ ಮಾಲೀಕರನ್ನು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ವೈರಲ್ ವಿಡಿಯೋದಲ್ಲಿರುವವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಘಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ರಸ್ತೆಯ ಮಧ್ಯದಲ್ಲಿ ಮದ್ಯ ಸೇವಿಸಿ ಕುಣಿದಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಐಷಾರಾಮಿ ಕಾರು ಟೊಯೊಟಾ ಫಾರ್ಚ್ಯೂನರ್‌ನಿಂದ ಈ ಗುಂಪು ಹೊರಬರುತ್ತಿದೆ. ತಮ್ಮ ರೈಫಲ್‌ಗಳನ್ನು ಕ್ಯಾಮೆರಾದ ಮುಂದೆ ತೋರಿಸುತ್ತಾ ಪೋಸ್ ಕೊಡುತ್ತಿದ್ದಾರೆ.
ನಾಲ್ಕೈದು ಯುವಕರು ರಸ್ತೆ ತಡೆದು ಮದ್ಯ ಸೇವಿಸಿ ಹಾಗೂ ಶಸ್ತ್ರಾಸ್ತ್ರಗಳನ್ನು ಝಳಪಿಸುತ್ತಿರುವುದು ಕಂಡು ಬಂದಿದೆ. ಘಟನೆಯ ಬಗ್ಗೆ ಪೊಲೀಸರು ಗಮನ ಹರಿಸಿದ್ದಾರೆ ಎಂದು ಇಂದಿರಾಪುರಂ ಎಸಿಪಿ ಸ್ವತಂತ್ರ ಸಿಂಗ್ ಹೇಳಿದ್ದಾರೆ. ಕಾರಿನ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಲಾಗಿದ್ದು, ಚಾಲಕನನ್ನು ಚಿರಂಜೀವ್ ವಿಹಾರ್ ನಿವಾಸಿ ರಾಜಾ ಚೌಧರಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.