ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ಮಧ್ಯಾಹ್ನ 12:30 ರ ಸುಮಾರಿಗೆ ಎಸ್‌ಯುವಿ ಕಾರ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕಾರೊಳಗಿದ್ದ ಇರ್ಷಾದ್ ಮತ್ತು ಹಲೀಮ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನ ಸದ್ಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ಯಾರೇಜ್ ನಡೆಸುತ್ತಿರುವ ಇರ್ಷಾದ್ ಖಾನ್ ಮತ್ತು ಅವರ ಸಹೋದ್ಯೋಗಿ ಹಲೀಂ ಖಾನ್ ಅವರು ಮಹೀಂದ್ರ ಸ್ಕಾರ್ಪಿಯೊವನ್ನು ಟೆಸ್ಟ್ ಡ್ರೈವ್ ಮಾಡಲು ಹೊರಟಿದ್ದರು. ಡ್ಯಾಶ್‌ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ, ಟೆಸ್ಟ್ ಡ್ರೈವ್‌ನಲ್ಲಿ ಕಾರಿನಿಂದ ಹೊಗೆ ಬರಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಕಾರು ಕಪ್ಪು ಹೊಗೆಯಿಂದ ತುಂಬಿ ಹೋಗಿತ್ತು. ಈ ಘಟನೆಯ ವಿಡಿಯೋ, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಮುಂಭಾಗದ ಬಾಗಿಲು ಸ್ವಯಂಚಾಲಿತವಾಗಿ ಲಾಕ್ ಆಗಿದೆ. ಇರ್ಷಾದ್ ಕಾರಿನ ಹಿಂಬದಿಯಿಂದ ಜಿಗಿದಿದ್ದಾನೆ. ಆದರೆ ಹೊತ್ತಿಕೊಳ್ಳುತ್ತಿದ್ದಂತೆ ಹಲೀಂ ಸಿಕ್ಕಿಬಿದ್ದಿದ್ದಾನೆ. ಆದರೆ ಆತ ಸಮಯಪ್ರಜ್ಞೆ ತೋರಿಸಿ ಹಿಂದಿನ ಸೀಟಿಗೆ ಹೋಗಿ ಅಲ್ಲಿಂದ ತೆಗೆದು ಹೊರಗೆ ಬಂದಿದ್ದಾನೆ. ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.