ಅತಿ ವೇಗ-ತಿಥಿ ಬೇಗ ಅನ್ನೋ ಮಾತೊಂದು ಇದೆ. ಈ ಮಾತು ಅಕ್ಷರಶಃ ನಿಜ. ಅದರೂ ಕೆಲವರು ಈ ಮಾತನ್ನ ನಿರ್ಲಕ್ಷಿಸಿ ರಸ್ತೆಗಳಲ್ಲಿ ವಾಹನವನ್ನ ಅತಿವೇಗದಿಂದ ಓಡಿಸುತ್ತಾರೆ. ಇದರ ಪರಿಣಾಮ ರಸ್ತೆಯಲ್ಲೇ ಸಾವು-ನೋವು ಸಂಭವಿಸಿರುತ್ತೆ. ಈಗ ಅಂತಹದ್ದೇ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿದವರೆಲ್ಲ ಬೆಚ್ಚಿಬಿದ್ದಿದ್ದಾರೆ.
ಇದೇ ನೋಡಿ ಸಿಸಿಟಿವಿಯ ಭಯಂಕರ ದೃಶ್ಯ, ರಸ್ತೆಯಲ್ಲಿ ಸುಂಟರಗಾಳಿಯಂತೆ ನುಗ್ಗಿ ಬಂದ ಬುಲೆನೊ ಸ್ವಿಫ್ಟ್ ಕಾರು ಡಿವೈಡರ್‌ಗೆ ಗುದ್ದಿ, ಅಲ್ಲೇ 5-6 ಬಾರಿ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಆ ರಸ್ತೆಯಲ್ಲಿ ಯಾವುದೇ ವಾಹನಗಳಾಗಲಿ, ಯಾರೂ ಪಾದಚಾರಿಗಳು ಓಡಾಡ್ತಿರಲಿಲ್ಲ. ಆದರೆ ಕಾರು ಪಲ್ಟಿಯಾಗಿ ಬಿದ್ದ ರೀತಿಗೆ, ಕಾರಿನೊಳಗೆ ಇದ್ದ ನಾಲ್ವರಿಗೂ ಗಂಭೀರ ರೂಪದ ಗಾಯಗಳಾಗಿವೆ.
ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ದೆಹಲಿ ಎನ್ಸಿಆರ್ ಪೊಲೀಸ್ ಪರಿಶೀಲನೆ ನಡೆಸಿ, ಈ ಕಾರಿನೊಳಗಿದ್ದ ನಾಲ್ವರೂ ಸಹ ಅಪ್ರಾಪ್ತರಾಗಿದ್ದು, ಈ ಬುಲೆನೋ ಕಾರನ್ನ 12ನೇ ತರಗತಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿ ಡ್ರೈವ್ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಈ ನಾಲ್ವರು ಸ್ನೇಹಿತರಾಗಿದ್ದು, ಪಾಲಕರ ಗಮನಕ್ಕೆ ತರದೇ ಈ ಕಾರನ್ನ ಓಡಿಸುತ್ತಿದ್ದಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.
ಸದ್ಯಕ್ಕೆ ಪಾಲಕರ ಗಮನಕ್ಕೆ ವಿಷಯವನ್ನ ತರಲಾಗಿದೆ, ಮಕ್ಕಳ ಚಲನವಲನ ಮೇಲೆ ನಿಗಾ ಇಡಲು ತಾಕೀತು ನೀಡಲಾಗಿದೆ. ಇನ್ನೂ ವಿದ್ಯಾರ್ಥಿಗಳಿಗೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಕೂಡದು ಎಂದು ಪೊಲೀಸರು ಕಟ್ಟುನಿಟ್ಟಾಗಿ ವಾರ್ನಿಂಗ್ ಕೊಟ್ಟಿದ್ದಾರೆ.