
ಹಣ ಪಾವತಿ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಪ್ರಯಾಣಿಕರೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಸ್ಸಾಂ ಪೊಲೀಸರು ಉಬರ್ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.
ಇಬ್ಬರು ಪತ್ರಕರ್ತರಾದ ಮೊಹ್ಮದ್ ಅಬುಝರ್ ಚೌಧರಿ ಮತ್ತು ನಿಖಿತಾ ಜೈನ್ ಗುವಾಹತಿಯಲ್ಲಿ ಕಾಮಾಕ್ಯಗೆ ತೆರಳಲು ಉಬರ್ ಕ್ಯಾಬ್ ಏರಿದ್ದಾರೆ. ಅವರ ಪಾವತಿ ಮೋಡ್ ಡೀಫಾಲ್ಟ್ ಆಗಿ ಆನ್ ಲೈನ್ ಪೇಮೆಂಟ್ ಗೆ ಆಗಿತ್ತು. ಆದರೆ, ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಚಾಲಕ ತನಗೆ ನಗದು ರೂಪದಲ್ಲಿ ಪಾವತಿ ಮಾಡಬೇಕು ಎಂದು ವರಾತ ತೆಗೆದಿದ್ದಾನೆ.
ಸರೋವರದಲ್ಲಿ ಪುಟ್ಟ ಕಂದನ ಸರ್ಫಿಂಗ್ ನೋಡಿದ್ರೆ ಬೆರಗಾಗ್ತೀರಾ….!
ಇದಕ್ಕೆ ಪ್ರಯಾಣಿಕರು ಒಪ್ಪಿಲ್ಲ. ಈಗಾಗಲೇ ನಾವು ಆನ್ಲೈನ್ ಪಾವತಿ ಮೋಡ್ ಅನ್ನು ಸೆಲೆಕ್ಟ್ ಮಾಡಿದ್ದು, ಅದರ ಮೂಲಕವೇ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿದೆ. ವ್ಯಗ್ರಗೊಂಡ ಚಾಲಕ ಕಾರಿನಲ್ಲಿದ್ದ ರಾಡ್ ನಿಂದ ಅಬುಝರ್ ಮೇಲೆ ಹಲ್ಲೆ ಮಾಡಿದ್ದಾನೆ ಮತ್ತು ಆತನ ಮೇಲೆ ಕಾರು ಚಲಾಯಿಸುವ ಪ್ರಯತ್ನ ನಡೆಸಿದ ಎಂದು ನಿಖಿತಾ ಜೈನ್ ಆರೋಪಿಸಿದ್ದಾರೆ.
ಈ ಬಗ್ಗೆ ಚಾಲಕನ ಫೋಟೋ ಸಹಿತ ನಿಖಿತಾ ಅಸ್ಸಾಂ ಪೊಲೀಸರಿಗೆ ದೂರನ್ನು ಟ್ವೀಟ್ ಮೂಲಕ ನೀಡಿದ್ದರು. ಈ ದೂರಿನ ಆಧಾರದಲ್ಲಿ ಸ್ವತಃ ಗುವಾಹತಿ ಪೊಲೀಸ್ ಆಯುಕ್ತ ಹರ್ದಿ ಸಿಂಗ್ ಅವರು ಮತ್ತಷ್ಟು ಮಾಹಿತಿಗಳನ್ನು ಪಡೆದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಇದಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.