ಶೂ ಖರೀದಿ ವೇಳೆ ಉತ್ತರಪ್ರದೇಶದ ಗಾಜಿಯಾಬಾದ್‌ನ ಸಿಹಾನಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘರ್ಷಣೆಯ ಸಮಯದಲ್ಲಿ ಒಂದು ಗುಂಡು ಹಾರಿಸಲಾಗಿದ್ದು ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹತ್ಯೆಯ ನಂತರ ತಡರಾತ್ರಿ ರಾಜ್ಯಾದ್ಯಂತ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಇದರ ಹೊರತಾಗಿಯೂ ಗಾಜಿಯಾಬಾದ್‌ನ ಸಿಹಾನಿ ಗೇಟ್‌ನಲ್ಲಿ ಅಹಿತಕರ ಘಟನೆಗಳು ನಡೆದಿವೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಇತರರನ್ನು ಪಕ್ಕಕ್ಕೆ ಸರಿಯುವಂತೆ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದು.
ನಂದಗ್ರಾಮ್ ಎಸ್‌ಪಿ ಈ ಬಗ್ಗೆ ಮಾಹಿತಿ ನೀಡಿದ್ದು, “ಗಾಂಧಿನಗರ ಮಾರುಕಟ್ಟೆಯಲ್ಲಿ ಕೆಲವು ಹುಡುಗರು ಹೊಡೆದಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದಿತು, ತಕ್ಷಣ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿತು. ಪ್ರಾಥಮಿಕ ತನಿಖೆಯ ಸಮಯದಲ್ಲಿ ಎರಡು ಗುಂಪುಗಳು ಶೂ ಖರೀದಿಸುವ ವಿಚಾರದಲ್ಲಿ ಜಗಳವಾಡಿದ್ದು ಗಮನಕ್ಕೆ ಬಂದಿತು. ಕೆಲವು ಹುಡುಗರು ಅಂಗಡಿ ಮಾಲೀಕರಿಗೆ ಥಳಿಸಿದ್ದಾರೆ.ಈ ಬಗ್ಗೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಆರೋಪಿಗಳನ್ನು ಹಿಡಿಯಲು ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ. ಜಗಳದ ವೇಳೆ ಒಂದು ಗುಂಡು ಹಾರಿಸಲಾಗಿದೆ ಎಂದು ಕೆಲವು ಸಾಕ್ಷಿಗಳು ಹೇಳಿದ್ದಾರೆ.ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಪ್ರಕರಣವನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು” ಎಂದಿದ್ದಾರೆ.