ಆಂಧ್ರಪ್ರದೇಶದಲ್ಲಿ ರೈತರು ನಡೆಸುತ್ತಿರುವ ‘ಅಮರಾವತಿ ಮಹಾ ಪಾದಯಾತ್ರೆ’ಯ ವೇಳೆ ಹೃದಯಾಘಾತಕ್ಕೆ ಒಳಗಾದ ರೈತನೊಬ್ಬನ ಜೀವವನ್ನು ಪೊಲೀಸರು ಕಾಪಾಡಿದ್ದು, ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ರಾಜಮಹೇಂದ್ರವರಂನ ಗ್ಯಾಮನ್ ಸೇತುವೆಯ ಬಳಿ ಈ ಘಟನೆ ನಡೆದಿದೆ. ಅಮರಾವತಿ ರೈತರು ಆಯೋಜಿಸಿದ್ದ ‘ಮಹಾ ಪಾದಯಾತ್ರೆ’ ವೇಳೆ ರಾಜಮಹೇಂದ್ರವರಂನ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರನ್ನು ಗ್ಯಾಮನ್ ಸೇತುವೆ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರೈತರ ವಾಕಥಾನ್ ವೇಳೆ ಸೇತುವೆ ಮೇಲೆ ವ್ಯಕ್ತಿಯೊಬ್ಬ ಕುಸಿದು ಬಿದ್ದಿರುವುದನ್ನು ಗಮನಿಸಿದ ಅವರು ರೈತನ ಜೀವ ಕಾಪಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ತುರ್ತು ಚಿಕಿತ್ಸೆಯನ್ನು ನೀಡಿದ ಪೊಲೀಸರು ನಂತರ ಆಂಬ್ಯುಲೆನ್ಸ್ಗೆ ಕರೆ ಮಾಡಿ ರೈತನನ್ನು ಆಸ್ಪತ್ರೆಗೆ ಕರೆದೊಯ್ದರು. ಆಂಧ್ರಪ್ರದೇಶದ ಡಿಜಿಪಿ ಕೆವಿ ರಾಜೇಂದ್ರನಾಥ ರೆಡ್ಡಿ ಅವರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.