
ಇವರನ್ನು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಆರು ಪೊಲೀಸ್ ಅಧಿಕಾರಿಗಳು ರಾಜಸ್ಥಾನದ ರೋಡ್‌ವೇಸ್ ಬಸ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭರತ್‌ಪುರದ ಅಮೋಲಿ ಟೋಲ್ ಪ್ಲಾಜಾದಲ್ಲಿ ಮೂವರು ವ್ಯಕ್ತಿಗಳು ಆರೋಪಿಗಳಿದ್ದ ಬಸ್ ಸಮೀಪ ಬಂದಿದ್ದಾರೆ. ಅವರಲ್ಲಿ ಒಬ್ಬ ಬಂದೂಕನ್ನು ಝಳಪಿಸುತ್ತಾ ವಾಹನದತ್ತಿರ ಬರೋತ್ತಿರೋದು ದೃಶ್ಯದಲ್ಲಿ ಕಂಡುಬಂದಿದೆ. ಅವರು ಬಸ್‌ನ ಬಾಗಿಲಿನ ಬಳಿ ಬಂದವರೇ ಒಂದು ಕ್ಷಣ ಕಾದು ಬಳಿಕ ಗುಂಡು ಹಾರಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಬಸ್ಸಿನ ಬಾಗಿಲ ಬಳಿ ಬಂದು ಗುಂಡು ಹಾರಿಸಲು ಪ್ರಾರಂಭಿಸಿದ್ರೆ, ಮೂರನೇಯ ವ್ಯಕ್ತಿ ಕಿಟಕಿಗಳ ಮೂಲಕ ಇಣುಕಿ ನೋಡಿ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ನೇರವಾಗಿ ಗುಂಡು ಹಾರಿಸುತ್ತಾನೆ. ಬಳಿಕ ಮೂರು ಜನ ಸೇರಿ ಗುಂಡಿನ ದಾಳಿ ನಡೆಸುತ್ತಾರೆ.
ಈ ಘಟನೆಯಲ್ಲಿ ಭಯಭೀತರಾದ ಪ್ರಯಾಣಿಕರ ಪೈಕಿ ಕೆಲವರು ಬಾಗಿಲ ಮೂಲಕವೇ ಹೊರಗಡೆ ಓಡಿದ್ರೆ ಇನ್ನು ಕೆಲವರು ಕಿಟಕಿಗಳಿಂದಲೂ ಹೊರಬಂದಿದ್ದಾರೆ. ಸುಮಾರು ಎರಡು ನಿಮಿಷಗಳವರೆಗೆ ಈ ದಾಳಿ ಮುಂದುವರಿಯುತ್ತದೆ. ಈ ದಾಳಿಯ ಪರಿಣಾಮವಾಗಿ, ದರೋಡೆಕೋರ ಕುಲದೀಪ್ ಜಘೀನಾ ಆಸ್ಪತ್ರೆಗೆ ತಲುಪುವ ವೇಳೆಗೆ ಸಾವನ್ನಪ್ಪುತ್ತಾನೆ. ಆತನ ಸಹಚರ ವಿಜಯಪಾಲ್ ಗಂಭೀರ ಗಾಯಗೊಂಡಿರುತ್ತಾನೆ. ಬಸ್ಸಿನಲ್ಲಿದ್ದ ಇತರ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ.
ಕಳೆದ ವರ್ಷ ಭರತ್‌ಪುರದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಕುಲದೀಪ್ ಮತ್ತು ವಿಜಯ್‌ಪಾಲ್ ಕೃಪಾಲ್ ಜಘೀನಾ ಎಂಬವರನ್ನು ಹತ್ಯೆ ಮಾಡಿದ್ದರು. ಘಟನೆಯ ಬಳಿಕ ಎಂಟು ದಾಳಿಕೋರರ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸುತ್ತಾರೆ. ಇನ್ನು ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಬಸ್ಸಿನೊಳಗೆ ಪ್ರತಿದಾಳಿ ಮಾಡಲು ಸಾಧ್ಯವಾಗೋದಿಲ್ಲ. ಯಾಕಂದ್ರೆ ದಾಳಿಕೋರರು ಪೊಲೀಸರ ಮುಖಕ್ಕೆ ಮೆಣಸಿನ ಪುಡಿ ಎರಚಿರುತ್ತಾರೆ. ಆದರೂ ಸಹ ದಾಳಿಕೋರರು ಬಂದ ವಾಹನದ ಮೂಲಕ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಅಧಿಕಾರಿಗಳು ಬೆನ್ನಟ್ಟಿ ಗುಂಡಿನ ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಅವರು, ದಾಳಿಕೋರರು ಇಬ್ಬರು ವ್ಯಕ್ತಿಗಳ ಜೊತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಮೆಣಸಿನ ಪುಡಿ ಎರಚಿದ್ದಾರೆ. ವಿಜಯಪಾಲ್ ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಮತ್ತು ಘಟನೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳಿಗೂ ಗಾಯವಾಗಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಮೃತ ಕುಲದೀಪ್ ಕುಟುಂಬ ಸದಸ್ಯರು ಎಸ್ಪಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಉಳಿದ ಶಂಕಿತರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದುಃಖ ವ್ಯಕ್ತಪಡಿಸಿದ ಕುಲದೀಪ್ ಸಹೋದರಿ, ನನ್ನ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಸ್ಸಿನಲ್ಲಿದ್ದ ಅಮಾಯಕ ಪ್ರಯಾಣಿಕರ ಪ್ರಾಣಕ್ಕೂ ಅಪಾಯದ ಸಾಧ್ಯತೆಯಿತ್ತು. ಹೀಗಾಗಿ ದಾಳಿಕೋರರ ವಿರುದ್ಧ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.