
ಕೇವಲ ಒಂದು ನಿಮಿಷದೊಳಗೆ ನಡೆದ ಸಂಪೂರ್ಣ ಕಳ್ಳತನದ ಕೃತ್ಯ ಹೋಟೆಲ್ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ ಕುಟುಂಬವೊಂದು ತೆಲಂಗಾಣದ ಸೈಬರಾಬಾದ್‌ನಿಂದ ಬಂದಿದ್ದು, ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಜೈಪುರಕ್ಕೆ ಪ್ರಯಾಣಿಸಿತ್ತು. ಕಳುವಾದ ಬ್ಯಾಗ್‌ನಲ್ಲಿ ಅಂದಾಜು 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇತ್ತು.
ಪೊಲೀಸರ ಪ್ರಕಾರ ತೆಲಂಗಾಣದ ಸೈಬರಾಬಾದ್‌ನ ಉದ್ಯಮಿ ನರೇಶ್ ಕುಮಾರ್ ಗುಪ್ತಾ ಅವರು ಮುಹಾನಾ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ.
ನರೇಶ್ ಕುಮಾರ್ ಗುಪ್ತಾ ಹೈದರಾಬಾದ್‌ನಲ್ಲಿ ವೈದ್ಯಕೀಯ ವ್ಯವಹಾರ ನಡೆಸುತ್ತಿದ್ದಾರೆ. ಆ.8ರಂದು ಹಯಾತ್ ಹೊಟೇಲ್‌ನಲ್ಲಿ ಅವರ ಪುತ್ರ ಸಾಯಿರಾಮ್ ನ ಮದುವೆ ನಡೆದಿದ್ದು, ರಾತ್ರಿ 11:30ರ ಸುಮಾರಿಗೆ ನರೇಶ್ ಅವರ ಪತ್ನಿಯ ಬಿಳಿ ಬಣ್ಣದ ಬ್ಯಾಗ್ ಮಂಟಪದ ಬಳಿ ಕಳ್ಳತನವಾಗಿತ್ತು.
ರಾತ್ರಿ 10:10 ರ ಸುಮಾರಿಗೆ 13 ರಿಂದ 14 ವರ್ಷದ ಹುಡುಗ ಮತ್ತು ಅನುಮಾನಾಸ್ಪದ ವ್ಯಕ್ತಿ ಮದುವೆ ಮೆರವಣಿಗೆಯೊಂದಿಗೆ ಹೋಟೆಲ್‌ಗೆ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಸ್ವಲ್ಪ ಸಮಯದ ನಂತರ ಹುಡುಗನು ಮಂಟಪದ ಬಳಿಯಿಂದ ಬ್ಯಾಗ್ ಕದ್ದಿದ್ದು ತಕ್ಷಣ ಇಬ್ಬರೂ ಸ್ಥಳದಿಂದ ಓಡಿಹೋಗಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚುವರಿ ಡಿಸಿಪಿ ಪಾರಸ್ ಜೈನ್ ಪ್ರಕರಣದ ಮೇಲುಸ್ತುವಾರಿ ವಹಿಸಿದ್ದಾರೆ.