ನವದೆಹಲಿ: ಭಾರತದಲ್ಲಿ ಜನವರಿ 15 ರಂದು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಸೇನಾದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.
ಭಾರತೀಯ ಸೇನೆ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯ ಸುರಕ್ಷತೆಗೆ ಅದರ ಅಮೂಲ್ಯ ಕೊಡುಗೆಗೆ ಪದಗಳು ನ್ಯಾಯವನ್ನು ನೀಡುವುದಿಲ್ಲ ಎಂದು ಹೇಳಿದ್ದು, ಸಾಗರೋತ್ತರ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನೆಯ ಕೊಡುಗೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆಯ ಸಿಬ್ಬಂದಿ ಪ್ರತಿಕೂಲ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ನೈಸರ್ಗಿಕ ವಿಕೋಪಗಳು ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಸೇನಾ ದಿನದ ಸಂದರ್ಭದಲ್ಲಿ ವಿಶೇಷವಾಗಿ ನಮ್ಮ ಧೈರ್ಯಶಾಲಿ ಸೈನಿಕರು, ಗೌರವಾನ್ವಿತ ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ಸೇನೆಯು ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಭಾರತೀಯ ಸೇನೆಯ ಅಮೂಲ್ಯ ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ಸ್ಥಾನವನ್ನು ಜನವರಿ 15, 1949 ರಂದು ಭಾರತದ ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಆಗಿದ್ದ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಹಸ್ತಾಂತರಿಸಲಾಗಿತ್ತು.
ಸೇನಾದಿನದ ಅಂಗವಾಗಿ ರಾಜಧಾನಿ ದೆಹಲಿಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ(ಸೇನೆ), ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ(ವಾಯುಸೇನೆ), ಅಡ್ಮಿರಲ್ ಆರ್ ಹರಿಕುಮಾರ್(ನೌಕಾಪಡೆ) ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛಗಳನ್ನು ಇರಿಸಿ ನಮನ ಸಲ್ಲಿಸಿದರು.