ಭಾರತದಲ್ಲಿ ಲಕ್ಷಾಂತರ ಶಿವನ ದೇವಾಲಯ ಇದೆ. ಶಿವನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಕೋಟಿಯಲ್ಲಿದೆ. ಒಳ್ಳೆ ವರ ಸಿಗುವಂತೆ, ಪತಿಯ ಆಯಸ್ಸು ವೃದ್ಧಿಯಾಗುವಂತೆ, ಆರೋಗ್ಯದಲ್ಲಿ ಯಾವುದೇ ಏರುಪೇರಾಗದಂತೆ ಬೇಡಿಕೊಳ್ಳಲು ಅನೇಕ ಮಹಿಳೆಯರು ಭೋಲೆನಾಥನ ಮೊರೆ ಹೋಗ್ತಾರೆ. ಕೇಳಿದ್ದೆಲ್ಲವನ್ನು ಪ್ರೀತಿಯಿಂದ ನೀಡುವ ದೇವರು ಅಂದ್ರೆ ಅದು ಈಶ್ವರ ಎಂದೇ ನಂಬಲಾಗಿದೆ.
ಅನೇಕ ವರ್ಷಗಳಿಂದ ಮದುವೆ ಆಗ್ತಿಲ್ಲ, ನಾನಾ ಕಾರಣಕ್ಕೆ ಮದುವೆ ತಪ್ಪಿ ಹೋಗ್ತಿದೆ, ಸಂಬಂಧ ಸರಿಯಾಗಿ ಕೂಡಿ ಬರ್ತಿಲ್ಲ ಎನ್ನುವವರು ಶಿವನ ಮೊರೆ ಹೋಗಬಹುದು. ಬಿಕಾನೇರ್ ನಲ್ಲಿರುವ ಈ ಶಿವನ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮದುವೆಯಾಗದವರು ಶಿವನ ದರ್ಶನ ಪಡೆದ್ರೆ ಶೀಘ್ರವೇ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ನಂಬಲಾಗಿದೆ.
ಈ ದೇವಸ್ಥಾನ ಬಿಕನೇರ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ರಿದ್ಮಲ್ಸರ್ ಪುರೋಹಿತ್ ಸಾಗರ್ ಗ್ರಾಮದಲ್ಲಿದೆ. ದುಂಗರೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗ ನೆಲದಿಂದ ಐದು ಅಡಿ ಎತ್ತರಲ್ಲಿದೆ. ಹಾಗಾಗಿ ಜನರು ನಿಂತೇ ಈ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಈ ದೇವಸ್ಥಾನ 200 ವರ್ಷಗಳಷ್ಟು ಹಳೆಯದು. ಇದನ್ನು ದುಂಗರ್ ಸಿಂಗ್ ಸ್ಥಾಪನೆ ಮಾಡಿದ. ಆತನ ಮಕ್ಕಳು ಜೀರ್ಣೋದ್ದಾರ ಮಾಡಿದ್ದಾರೆ. ಅಮವಾಸ್ಯೆಯಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಮದುವೆಗೆ ತೊಂದರೆ ಅನುಭವಿಸುತ್ತಿರುವ ಜನರು ಅಮವಾಸ್ಯೆ ದಿನ ಇಲ್ಲಿಗೆ ಬಂದು ಪೂಜೆಯಲ್ಲಿ ಪಾಲ್ಗೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. 25 ಶಿವಲಿಂಗ ಈ ದೇವಸ್ಥಾನದಲ್ಲಿದೆ. ತಾಯಿ ಭಗವತಿ ವಿಗ್ರಹವೂ ಇಲ್ಲಿದೆ. ಕಾಳಿ ದೇವಿ ಕೂಡ ಇಲ್ಲೆ ನೆಲೆಸಿದ್ದು, ಭಕ್ತರ ಎಲ್ಲ ಆಸೆ ನೆರವೇರುತ್ತದೆ.