ಲಘು ರೋಗ ಲಕ್ಷಣಗಳನ್ನು ಹೊಂದಿದ್ದರೂ ಸಹ ಒಮಿಕ್ರಾನ್ ಅಮೆರಿಕಾದಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಬಹಳ ಬೇಗ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಾ ಸಾಗಿದೆ.
ಕೋವಿಡ್‌ನ ಹಿಂದಿನ ರೂಪಾಂತರಿಗಳನ್ನು ಒಮಿಕ್ರಾನ್ ಹಿಂದಿಕ್ಕಿ ಸಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ತೀವ್ರತರನಾದ ಬೇಡಿಕೆ ಹೆಚ್ಚುತ್ತಿದೆ ಎಂದು ಅಮೆರಿಕದ ಕೆಲವೊಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ
ಕನೆಕ್ಟಿಕಟ್‌ನಲ್ಲಿರುವ ಯೇಲ್ ನ್ಯೂ ಹವೆನ್ ಆಸ್ಪತ್ರೆಯಲ್ಲಿ ’ಏಪ್ರಿಲ್ 2020ರಲ್ಲಿ 451 ಕೋವಿಡ್ ಸೋಂಕಿತರು ಇದ್ದಿದ್ದು ಸಾರ್ವಕಾಲಿಕ ಮಟ್ಟದ ದಾಖಲೆಯಾಗಿತ್ತು” ಎಂದು 1541 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯ ನಿರ್ವಹಣೆ ನೋಡಿಕೊಳ್ಳುವ ರಾಬರ್ಟ್ ಫಾಗರ್ಟಿ ತಿಳಿಸಿದ್ದು, “ಮುಂದಿನ ವಾರ ಈ ದಾಖಲೆ ಛಿದ್ರವಾಗಲಿದೆ ಎಂದು ನನಗೆ ಅನಿಸುತ್ತದೆ” ಎಂದಿದ್ದಾರೆ.
ಆದರೆ ಹಿಂದಿನ ರೂಪಾಂತರಿಗಳಿಗೆ ಹೋಲಿಕೆ ಮಾಡಿದಲ್ಲಿ ಒಮಿಕ್ರಾನ್‌ನಿಂದಾಗಿ ಅಷ್ಟೇನು ಮಂದಿ ಐಸಿಯು ಸೇರುವ ಪ್ರಮೇಯ ಬಂದಿಲ್ಲ, ಅದರಲ್ಲೂ ಲಸಿಕಾಕರಣದ ದರ ಹೆಚ್ಚಿರುವ ಪ್ರದೇಶಗಳಲ್ಲಿ ಎಂದು ರಾಬರ್ಟ್ ತಿಳಿಸುತ್ತಾರೆ.
ದಿನೇ ದಿನೇ ದಾಖಲೆ ಮಟ್ಟದಲ್ಲಿ ಏರುತ್ತಿರುವ ಒಮಿಕ್ರಾನ್ ಸೋಂಕಿನ ನಿಯಂತ್ರಣಕ್ಕೆ ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಮಿಕ್ರಾನ್ ಸೋಂಕು ಲಘು ರೋಗಲಕ್ಷಣಗಳನ್ನಷ್ಟೇ ತೋರುತ್ತಿದ್ದರೂ ಸಹ ಲಸಿಕೆಯ ಬೂಸ್ಟರ್‌ಗಳನ್ನು ತೆಗೆದುಕೊಂಡು, ಉತ್ಕೃಷ್ಟ ಗುಣಮಟ್ಟದ ಮಾಸ್ಕ್ ಧರಿಸಿಕೊಂಡು ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.