ಕೋವಿಡ್ 19ನ ಒಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಗುಣವಾಗುತ್ತದೆ ಹಾಗೂ ಇದು ಗಂಭೀರವಾದ ಅನಾರೋಗ್ಯವನ್ನು ಉಂಟುಮಾಡುವಂತೆ ಕಾಣುತ್ತಿಲ್ಲ ಎಂದು ಪುದುಚೆರಿಯ ಜವಹರಲಾಲ್ ವಿಶ್ವವಿದ್ಯಾಲಯದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ನಿರ್ದೇಶಕ ಡಾ.ರಾಕೇಶ್ ಅಗರ್ವಾಲ್ ಹೇಳಿದ್ದಾರೆ. ಆದರೆ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಜನರು ಹೆಚ್ಚು ಜಾಗರೂಕವಾಗಿ ಇರಬೇಕು. ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ರು.
ಒಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಬೂಸ್ಟರ್ ಡೋಸ್ ಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅಗರ್ವಾಲ್, ಲಸಿಕೆ ಕ್ಷೇತ್ರದಲ್ಲಿರುವ ತಜ್ಞರು ಈ ಎಲ್ಲದರ ಬಗ್ಗೆ ಗಮನ ಹರಿಸುತ್ತಲೇ ಇದ್ದಾರೆ. ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯತೆ ಇರುವಂತೆ ಕಾಣುತ್ತಿಲ್ಲ. ದೇಶದಲ್ಲಿರುವ ಜನತೆಯಲ್ಲಿ ಹೆಚ್ಚಿನ ಪ್ರಮಾಣವು ವೈರಸ್ಗೆ ಒಡ್ಡಿಕೊಂಡಿದೆ ಹಾಗೂ ಲಸಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದ್ರು.
ಒಮಿಕ್ರಾನ್ ರೂಪಾಂತರಿಯು ಅತ್ಯಂತ ವ್ಯಾಪಕವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಎ ಘೆಬ್ರೆಯೆಸಸ್ ಹೇಳುವ ಪ್ರಕಾರ, ಒಟ್ಟು 77 ದೇಶಗಳು ಈವರೆಗೆ ಕೊರೊನಾ ಒಮಿಕ್ರಾನ್ ರೂಪಾಂತರಿಯನ್ನು ವರದಿ ಮಾಡಿವೆ. ವಾಸ್ತವದಲ್ಲಿ ಈ ರೂಪಾಂತರಿಯು ಇನ್ನು ಕೆಲವು ದೇಶಗಳಲ್ಲಿ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.