ಕೇರಳದಲ್ಲಿ ಇಂದು ಸಹ ಒಮಿಕ್ರಾನ್ ಪ್ರಕರಣದಲ್ಲಿ ಹೆಚ್ಚಳವಾಗಿದ್ದು ಬರೋಬ್ಬರಿ 29ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 181ಕ್ಕೆ ಏರಿದೆ. ಕೇರಳ ಆರೋಗ್ಯ ಇಲಾಖೆ ಈ ಬಗ್ಗೆ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಇಂದು ವರದಿಯಾದವರಲ್ಲಿ ಇಬ್ಬರು ಸೋಂಕಿತರು ಕೇರಳದವರೆ ಆಗಿದ್ದು, ಇನ್ನುಳಿದವರು ವಿದೇಶಗಳಿಂದ ವಾಪಸ್ಸಾಗಿದ್ದವರಾಗಿದ್ದಾರೆ.
29 ಹೊಸ ಪ್ರಕರಣಗಳಲ್ಲಿ, 25 ಕಡಿಮೆ-ಅಪಾಯದ ದೇಶಗಳಿಂದ ಬಂದವರು, ಇಬ್ಬರು ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು ಮತ್ತು ಅಲಪ್ಪುಳ ಜಿಲ್ಲೆಯಲ್ಲಿ ಇಬ್ಬರು ಒಮಿಕ್ರಾನ್ ಗೆ ತುತ್ತಾಗಿದ್ದಾರೆ. ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ಯುಎಇಯಿಂದ ಬಂದವರು 20 ಮಂದಿ, ಮೂವರು ಕೆನಡಾದಿಂದ ಮತ್ತು ಇಬ್ಬರು ಯುಕೆಯಿಂದ, ಒಬ್ಬರು ಕತಾರ್‌ನಿಂದ ಮತ್ತು ಇನ್ನೊಬ್ಬರು ಪೂರ್ವ ಆಫ್ರಿಕಾದಿಂದ ಬಂದವರು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ, ಕೇರಳದಲ್ಲಿ 181 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 52 ಸೋಂಕಿತರು ಹೆಚ್ಚಿನ ಅಪಾಯದ ದೇಶಗಳಿಂದ ರಾಜ್ಯವನ್ನು ತಲುಪಿದ್ದು. 109 ಜನ ಕಡಿಮೆ ಅಪಾಯದ ದೇಶಗಳಿಂದ ಬಂದಿದ್ದಾರೆ. ಇನ್ನುಳಿದ 20 ಜನರಿಗೆ ವಿದೇಶಿ ಪ್ರಯಾಣದ ಇತಿಹಾಸವಿಲ್ಲದಿದ್ದರು ಒಮಿಕ್ರಾನ್ ವಕ್ಕರಿಸಿದೆ. ಪ್ರಸ್ತುತ ಕೇರಳದಲ್ಲಿ 139 ಸಕ್ರಿಯ ಒಮಿಕ್ರಾನ್ ಪ್ರಕರಣಗಳಿದ್ದು, 42 ಒಮಿಕ್ರಾನ್ ಸೋಂಕಿತರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.